ಶಿವಗಂಗೆ ಗ್ರಾಮದ ರಸ್ತೆಗೆ ಜಾಗ ಇರಿಸಿ ಕ್ರೀಡಾಂಗಣ ನಿರ್ಮಿಸಿ

TKE pp
ತರೀಕೆರೆ ಪುರಸಭೆ ವಿಶೇಷ ಸಭೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿದರು. ಪರಮೇಶ್, ರಿಹಾನಾ ಪರ್ವೀನ್, ಆರ್.ಕುಮಾರಪ್ಪ, ಎಚ್.ಪ್ರಶಾಂತ್ ಇದ್ದರು.
Published on

ತರೀಕೆರೆ: ಪಟ್ಟಣ ಹೊರ ವಲಯದ ಎ.ರಂಗಾಪುರದಲ್ಲಿ ಕ್ರೀಡಾಂಗಣ ನಿರ್ಮಿಸುವ ಯೋಜನೆ ಒಳ್ಳೆಯದಾಗಿದ್ದರೂ ಶಿವಗಂಗೆ ಸುತ್ತಮುತ್ತಲಿನ ಪ್ರದೇಶದ ರೈತರ ಜಮೀನಿಗೆ ದಾರಿ ಇಲ್ಲದಂತಾಗುತ್ತದೆ. ಹಾಗಾಗಿ ರಸ್ತೆಗೆ ಜಾಗ ಇರಿಸಿ ಕ್ರೀಡಾಂಗಣ ನಿರ್ಮಿಸಿ ಎಂದು ಪುರಸಭೆ ಸದಸ್ಯೆ ಸಿ.ಆಶಾ ಒತ್ತಾಯಿಸಿದರು.

ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಯುವ ಜನತೆಯ ಕ್ರೀಡಾ ಚಟುವಟಿಕೆಗೆ ಉತ್ತೇಜನ ನೀಡುವ ಜತೆ ಜತೆಗೆ ರೈತರ ಹಿತ ಕೂಡ ಕಾಪಾಡುವ ಸಲುವಾಗಿ ಶಿವಗಂಗೆ ಗ್ರಾಮದ ಜಮೀನಿಗೆ ದಾರಿ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಎ.ರಂಗಾಪುರದ 11 ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹ ಜಾಗ ಹಸ್ತಾಂತರಕ್ಕೆ ಪತ್ರ ಬರೆದಿವೆ. ಸದಸ್ಯರು ಒಮ್ಮತದಿಂದ ಸಮ್ಮತಿಸಿ ಕ್ರೀಡಾಂಗಣ ನಿರ್ಮಾಣಕ್ಕೆ ಬೆಂಬಲಿಸಬೇಕು. ಶಿವಗಂಗೆ ಗ್ರಾಮದ ದಾರಿ ಸಮಸ್ಯೆ ಎದುರಾದಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬೋಜರಾಜ್ ಮಾತನಾಡಿ, ಎ.ರಂಗಾಪುರದಲ್ಲಿ ಕ್ರೀಡಾಂಗಣ ನಿರ್ಮಿಸಿದರೆ ಸದುಪಯೋಗವಾಗಲಾರದು. ಮೀಸಲಿರಿಸಿರುವ 11 ಎಕರೆ ಜಾಗದಲ್ಲಿ ನಾಲ್ಕೈದು ಎಕರೆಯಲ್ಲಿ ಮಾತ್ರ ಕ್ರೀಡಾಂಗಣ ನಿರ್ಮಿಸಲು ಸಾಧ್ಯವಾಗಲಿದ್ದು, ಉಳಿದ ಜಾಗ ಹಾಳುಬೀಳಲಿದೆ. ಆ ಜಾಗದಲ್ಲಿ ಹೈಟೆನ್ಷನ್ ಲೈನ್ ಇರುವುದರಿಂದ ಯಾವಾಗ ಬೇಕಾದರೂ ಅಪಾಯ ಸಂಭವಿಸಬಹುದು. ಹಾಗಾಗಿ ಪಟ್ಟಣದ ನಡುವಿನ ವಾರದ ಸಂತೆ ಜಾಗ ಅಥವಾ ಅರಣ್ಯ ಇಲಾಖೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಜಿ.ಎಚ್.ಶ್ರೀನಿವಾಸ್ ಮಾತನಾಡಿ, ವಾರದ ಸಂತೆ ಜಾಗ ಸುಸಜ್ಜಿತ ಕ್ರೀಡಾಂಗಣಕ್ಕೆ ಸಾಕಾಗುವುದಿಲ್ಲ. ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಕಷ್ಟ. ಆದ್ದರಿಂದ ಹೈಟೆನ್ಷನ್ ಲೈನ್ ಇರುವ ಜಾಗದ ಬಲ ಬದಿ ಈಜುಕೊಳ, ಎಡ ಬದಿ ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದರು.
ಜಾಗ ಒತ್ತುವರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಅಳತೆ ಮಾಡಿಸಿ ಬೇಲಿ ನಿರ್ಮಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಸಭೆಯ ಗಮನಕ್ಕೆ ತಂದರು. ಉಪಾಧ್ಯಕ್ಷೆ ರಿಹಾನಾ ಪರ್ವೀನ್, ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಕುಮಾರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net