ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿ

MLA Dinakara Shetty Inspection in Gokrna
Published on

ಗೋಕರ್ಣ: ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಕೇವಲ ಹಾರಿಕೆ ಉತ್ತರ ನೀಡುವ ಬದಲು ಶಾಶ್ವತ ಪರಿಹಾರಕ್ಕೆ ನಿರ್ದಿಷ್ಟ ಪ್ರಯತ್ನದ ಅಗತ್ಯವಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಮಂಗಳವಾರ ಇಲ್ಲಿನ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಸ್ಯೆ ಅಹವಾಲು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಸಕರು ಸಭೆ ನಡೆಸುತ್ತಾರೆ ಹೋಗುತ್ತಾರೆ. ಮತ್ತೆ ಮುಂದಿನ ಸಭೆಯಲ್ಲಿ ನೋಡಿಕೊಳ್ಳುವ ಎನ್ನುವ ಮನೋಭಾವ ಅಧಿಕಾರಿಳಲ್ಲಿ ಇರಬಾರದು. ಇದರಿಂದ ಜನರ ಸಮಸ್ಯೆ ಕೊನೆಗಾಣದೆ ಬೆಳೆಯುತ್ತ ಹೋಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಗೋಕರ್ಣ ಸೇರಿ ಹತ್ತಿರದ ವಿವಿಧ ಗ್ರಾಪಂ ನಾಗರಿಕರು ಜಲ ಜೀವನ ಅಭಿಯಾನ ಕಾಮಗಾರಿ ಮುಗಿದಿದ್ದರೂ ಕೆಲವೆಡೆಗಳಲ್ಲಿ ಮನೆ ಮನೆಗೆ ನೀರು ಬಾರದಿರುವ ಬಗ್ಗೆ ಗಮನ ಸೆಳೆದರು.

ಅದೇ ರೀತಿ ಪ್ರವಾಸೋದ್ಯಮ ಕೇಂದ್ರ ಗೋಕರ್ಣ ಮತ್ತು ಗ್ರಾಮಾಂತರದ ಕೆಲವೆಡೆಗಳಲ್ಲಿ ನೀರಿನ ದುರುಪಯೋಗವಾಗುತ್ತಿದೆ ಎಂದು ಕೆಲವರು ದೂರಿದರು. ಈ ಹಿನ್ನೆಲೆಯಲ್ಲಿ ಗೋಕರ್ಣ ನಗರ ಭಾಗದಲ್ಲಿ ನೀರಿನ ಸಂಪರ್ಕ ಪಡೆದಿರುವ ಪ್ರತಿ ಮನೆಗಳಿಂದ ಏಕರೂಪದ ಶುಲ್ಕ ವಸೂಲಿ ಪದ್ಧತಿಯನ್ನು ಕೈಬಿಟ್ಟು ಪ್ರತಿ ಮನೆಯಲ್ಲಿ ಬಳಸಲಾದ ನೀರಿನ ಪ್ರಮಾಣವನ್ನು ಮೀಟರ್ ಮೂಲಕ ಅಳೆದು ಅದಕ್ಕೆ ಅನುಗುಣವಾಗಿ ಶುಲ್ಕದ ವ್ಯವಸ್ಥೆ ಕೈಗೊಳ್ಳಲು ತಿಳಿಸಲಾಯಿತು.

ಬಿತ್ತನೆ ಬೀಜ ಬೇಕು

ಗೋಕರ್ಣದ ಕೃಷಿ ಕೇಂದ್ರದಲ್ಲಿ ಜಯಾ ತಳಿಯ ಬಿತ್ತನೆ ಬೀಜಕ್ಕೆ ಗರಿಷ್ಠ ಬೇಡಿಕೆಯಿದೆ. ಆದರೆ ಇಲಾಖೆ ಅಧಿಕಾರಿಗಳು ಪ್ರತಿ ವರ್ಷದಂತೆ ಇದನ್ನು ಪೂರೈಸದೆ ಬೇರೆ ತಳಿ ಬೀಜ ಬಳಕೆಗೆ ರೈತರ ಮೇಲೆ ಒತ್ತಡ ಹೇರುತ್ತಿದ್ದಾರೆ. ಈಗಾಗಲೇ ಬಿತ್ತನೆಯ ಸಮಯ ಮೀರಿ ಹೋಗುತ್ತಿದ್ದು ಆದಷ್ಟು ಬೇಗ ಜಯಾ ಬೀಜಗಳನ್ನು ಒದಗಿಸಲು ಸಭೆಯಲ್ಲಿ ಹಾಜರಿದ್ದ ಎಲ್ಲ ರೈತರು ಆಗ್ರಹಿಸಿದರು.

ಈ ಬಗ್ಗೆ ಇಲಾಖೆಗೆ ಇರುವ ತೊಂದರೆಯನ್ನು ತಾಲೂಕು ಸಹಾಯಕ ಕೃಷಿ ಅಧಿಕಾರಿ ವೆಂಕಟೇಶಮೂರ್ತಿ ರೈತರಿಗೆ ವಿವರಿಸಿ ಜಯಾ ಬೀಜವನ್ನು ಪೂರೈಸುವ ಪ್ರಯತ್ನಮಾಡುವ ಭರವಸೆ ನೀಡಿದರು.

ಬಸ್ ಬಿಡುವಂತಾಗಲಿ

ನಿತ್ಯ ಸಾವಿರಾರು ಯಾತ್ರಿಕರು ಭೆಟಿ ನೀಡುವ ಗೋಕರ್ಣದಿಂದ ಸಂಜೆ ಆರು ಗಂಟೆಯ ನಂತರ ಅಂಕೋಲಾ ಕಡೆಗೆ ಈ ಹಿಂದೆ ಬಿಡಲಾಗುತ್ತಿದ್ದ ಬಸ್​ಅನ್ನು ರದ್ದು ಪಡಿಸಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಅದೇ ರೀತಿ ಸಂಜೆ 7-15ರ ನಂತರ ಅಂಕೋಲಾದಿಂದ ಗೋಕರ್ಣಕ್ಕೆ ಯಾವುದೇ ಬಸ್ ವ್ಯವಸ್ಥೆ ಇರುವುದಿಲ್ಲ. ಕಾರಣ ಇಲ್ಲಿಗೆ ಆಗಮಿಸುವ ಯಾತ್ರಿಕರ ಅನುಕೂಲಕ್ಕಾಗಿ ಗೋಕರ್ಣದಿಂದ ಮತ್ತು ಅಂಕೋಲಾದಿಂದ ರಾತ್ರಿ 8 ಗಂಟೆಗೆ ಈ ಹಿಂದೆ ಓಡಿಸಲಾಗುತ್ತಿದ್ದ ಬಸ್ ಪುನಾರಂಭಿಸಲು ಅನೇಕರು ಒತ್ತಾಯಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಸಹಾಯಕ ಇಂಜನಿಯರ್ ಮೋಹನ ಪಿ.ನಾಯ್ಕ,ಜ್ಯೂ.ಇಂಜನಿಯರ್ ಸೋಮನಾಥ ಭಂಡಾರಿ,ಜೆಜೆಎಂ ಇಂಜನಿಯರ್ ರಾಘವೇಂದ್ರ ನಾಯ್ಕ,ಎಪಿಎಂಸಿ ಇಲಾಖೆ ಕಾರ್ಯದರ್ಶಿ ಮತ್ತಿತರರಿದ್ದರು.ವೇದಿಕೆಯಲ್ಲಿ ಅಧ್ಯಕ್ಷೆ ಸುಮನಾ ಗೌಡ,ಉಪಾಧ್ಯಕ್ಷೆ ನಾತಾಲಾ ರೆಬೆಲ್ಲೊ ಇದ್ದರು.ಪಂಚಾಯತಿ ಅಧಿಕಾರಿ ವಿನಾಯಕ ಸಿದ್ದಾಪುರ ನಿರ್ವಹಿಸಿದರು.

ಭೇಟಿ: ಸಭೆಯ ನಂತರ ಇಲ್ಲಿನ ಬಸ್ ನಿಲ್ದಾಣ, ವಾರದ ಸಂತೆ ನಡೆಯುವ ಎಪಿಎಂಸಿ ಪ್ರಾಂಗಣ ಮತ್ತು ಶ್ರೀಮಹಾಬಲೇಶ್ವರ ಮಂದಿರದ ಸೋಮಸೂತ್ರ ನಾಲೆಗೆ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಅಲ್ಲಿನ ಸಮಸ್ಯೆ ಪರಿಶೀಲಿಸಿದರು.

ಭಾರಿ ಮಳೆಯ ವೇಳೆ ಸೋಮಸೂತ್ರ ನಾಲೆಯಿಂದ ನೀರು ಶ್ರೀಮಹಾಬಲೇಶ್ವರ ಮಂದಿರದ ಗರ್ಭಗುಡಿಗೆ ನುಗ್ಗಿ ಆತ್ಮಲಿಂಗವನ್ನು ಜಲಾವೃತಗೊಳಿಸುತ್ತಿರುವುದನ್ನು ತಡೆಯಲು ಕೈಗೊಳ್ಳಬಹುದಾದ ಕಾಮಗಾರಿಯ ಬಗ್ಗೆ ಇಂಜನಿಯರ್ ಜತೆ ಶಾಸಕರು ರ್ಚಚಿಸಿದರು.ಈ ಕುರಿತಾಗಿ ತಕ್ಷಣ ಕಾಮಗಾರಿ ಯೋಜಿಸಿ ಕ್ರಮಕ್ಕೆ ಮುಂದಾಗಲು ಶಾಸಕರು ಸೂಚಿಸಿದರು.

ಮಂದಿರ ಸಮಿತಿ ಸದಸ್ಯ ಮಹಾಬಲ ಉಪಾಧ್ಯ,ಪಂಚಾಯತಿ ಸದಸ್ಯರು,ಬಿಜೆಪಿ ಕಾರ್ಯಕರ್ತರು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net