'ಗ್ಯಾರಂಟಿ ಅರ್ಹ ಬಡವರಿಗೆ ಅನ್ವಯಿಸಲು ನಿಯಮ ರೂಪಿಸಿ'

Published on

ಮೈಸೂರು: ಗ್ಯಾರಂಟಿ ಯೋಜನೆಗಳನ್ನು ಎಲ್ಲರಿಗೂ ನೀಡುವ ಬದಲು ಅರ್ಹ ಬಡವರಿಗೆ ಮಾತ್ರ ಅನ್ವಯವಾಗುವಂತೆ ನಿಯಮ ರೂಪಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಸಂಯೋಜಕ) ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಕಾರ್ಯರೂಪಕ್ಕೆ ತಂದಿರುವುದು ಸ್ವಾಗತಾರ್ಹ. ಆದರೆ ಯೋಜನೆಯ ಅವಶ್ಯಕತೆ ಇಲ್ಲದಿರುವವರಿಗೂ ನೀಡಿ ಅನವಶ್ಯಕವಾದ ಸಮಸ್ಯೆಗಳನ್ನು ಸರ್ಕಾರವೇ ಸೃಷ್ಟಿಸಿ, ಆರ್ಥಿಕ ಸಮಸ್ಯೆಯು ಉಂಟಾಗುತ್ತದೆ ಎಂದು ಸಮಿತಿ ರಾಜ್ಯ ಸಂಯೋಜಕ ದೇವಗಳ್ಳಿ ಸೋಮಶೇಖರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಹಾಗೂ ಶಕ್ತಿ ಯೋಜನೆಗಳು ಬಡವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರವಲ್ಲದೆ ಆರ್ಥಿಕವಾಗಿ ಬಲಿಷ್ಠವಾಗಿರುವವರಿಗೂ ಹೋಗುತ್ತಿದೆ. ಹಾಗಾಗಿ ಗ್ಯಾರಂಟಿ ಯೋಜನೆಗಳನ್ನು ಎಲ್ಲರಿಗೂ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಮಾತ್ರ ಯೋಜನೆ ತಲುಪಿಸಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಬೇಕು ಎಂದು ಒತ್ತಾಯಿಸಿದರು.
ಆರ್ಥಿಕವಾಗಿ ಬಲಿಷ್ಠವಾಗಿರುವವರು, 5 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರು, ಸರ್ಕಾರಿ ನೌಕರರು, ಬಡತನ ರೇಖೆಗಿಂತ ಮೇಲ್ಪಟವರನ್ನು ಯೋಜನೆಯಿಂದ ಕೈಬಿಡಬೇಕು. ಇದನ್ನು ಸರ್ಕಾರ ಪರಾಮರ್ಶಿಸಬೇಕು ಎಂದು ಆಗ್ರಹಿಸಿದರು.
ಸಮಿತಿ ಮುಖಂಡರಾದ ಪ್ರಸನ್ನ ಕುಮಾರ್ ತಳೂರು, ಅರ್ಜುನಹಳ್ಳಿ ಕಾಂತರಾಜು, ಚಿಕ್ಕ ಜವರಪ್ಪ, ಮಂಜುನಾಥ್ ಮುರಡಗಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net