ಜೀವಜಲ ಸಮರ್ಪಕ ಬಳಕೆಗೆ ಯೋಜನೆ ರೂಪಿಸಿ

Make a plan for the proper use of living water.
ವಿಜಯಪುರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್​ ಸಭಾಂಗಣದಲ್ಲಿ ಕುಡಿಯುವ ನೀರಿನ ಕುರಿತು ವಿಡಿಯೋ ಸಂವಾದದ ಮೂಲಕ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಮತ್ತು ಜಿ.ಪಂ. ಸಿಇಒ ರಿಷಿ ಆನಂದ ಇದ್ದಾರೆ.
Published on

ವಿಜಯಪುರ: ಮುಂಬರುವ ಬೇಸಿಗೆಯಲ್ಲಿ ಜಿಲ್ಲೆಯ ಜನ& ಜಾನುವಾರುಗಳಿಗೆ ಕುಡಿಯುವ ನೀರಿನ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಈಗಿನಿಂದಲೇ ಯೋಜನೆ ರೂಪಿಸಿ ಕಾರ್ಯನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಖಡಕ್​ಎಚ್ಚರಿಕೆ ನೀಡಿದರು.

ಜಿಲ್ಲೆಯ ವಿವಿಧ ತಾಲೂಕುಗಳ ತಹಸೀಲ್ದಾರ, ತಾ.ಪಂ. ಇಒಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್​ ಸಭಾಂಗಣದಲ್ಲಿ ಬುಧವಾರ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿ, ಕಳೆದ ವರ್ಷಕ್ಕೆ ಹೋಲಿಸಿದರೇ ಪ್ರಸ್ತುತ ಜಿಲ್ಲೆಯಲ್ಲಿ ಅಂತಹ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಸದ್ಯದ ನೀರನ್ನು ಮಿತವಾಗಿ ಬಳಕೆ ಮಾಡಿಕೊಂಡಲ್ಲಿ ಏಪ್ರಿಲ್​ ಅಂತ್ಯದವರೆಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದಾಗ್ಯೂ ಮುಂದಿನ ಜುಲೈ ಅಂತ್ಯದವರೆಗೆ ಜಿಲ್ಲೆಗೆ ಬೇಕಾಗುವ ನೀರಿನ ಅವಶ್ಯಕತೆ ಅನುಸಾರ ಎಲ್ಲ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ಕೆರೆಗಳಲ್ಲಿ ನೀರು ತುಂಬಿಸಲು ಪ್ರತಿ 45 ದಿನಗಳಿಗೆ 2.5 ಟಿಎಂಸಿ ಅವಶ್ಯಕತೆ ಇದೆ. ಜಿಲ್ಲೆಯಲ್ಲಿರುವ 157 ಕೆರೆಗಳ ಪೈಕಿ 21 ಕೆರೆಗಳಲ್ಲಿ ಶೇ.1ರಿಂದ 30ರಷ್ಟು, 28 ಕೆರೆಗಳಲ್ಲಿ ಶೇ.31 ರಿಂದ 50 ರಷ್ಟು ಹಾಗೂ 92 ಕೆರೆಗಳಲ್ಲಿ ಶೇ.50 ರಿಂದ 99 ರಷ್ಟು ಅಂದರೆ 1.68 ಟಿಎಂಸಿ ನೀರು ಲಭ್ಯವಿದೆ. ಈ ಕೆರೆಗಳಲ್ಲಿನ ನೀರು ವ್ಯತಯವಾಗದಂತೆ ಹಾಗೂ ನೀರಿನ ಸದ್ಭಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದರು.

ಕೆರೆಗಳ ಸುತ್ತಮುತ್ತ ಜಾಲಿ ಕಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಬೇಕು. ಜಾಲಿ ಕಂಟಿಗಳು ಬೆಳೆದು ನೀರಿನ ವ್ಯಯವಾಗದಂತೆ ನಿಗಾವಹಿಸಬೇಕು. ಬಹುಹಳ್ಳಿ ಯೋಜನೆ ಕೆರೆಗಳ ಸುತ್ತಲಿನಲ್ಲಿ ನೀರಾವರಿಗಾಗಿ ಅನಧಿಕೃತವಾಗಿ ಅಳವಡಿಸಿದ ಪಂಪ್​ ಸೆಟ್​ಗಳನ್ನು ಕೂಡಲೇ ತೆರವುಗೊಳಿಸಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಅವರು, ಈ ಕಾರ್ಯದಲ್ಲಿ ಯಾವುದೇ ಲೋಪ ಕಂಡು ಬಂದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಕೆರೆಗಳಲ್ಲಿನ ನೀರು ವಿನಾಕಾರಣ ಪೋಲಾಗದಂತೆ ನೋಡಿಕೊಳ್ಳಬೇಕು. ಪ್ರತಿ ಸೋಮವಾರ ನೀರಿನ ಪ್ರಮಾಣದ ವರದಿ ಸಲ್ಲಿಸಬೇಕು. ಅಲ್ಲದೆ, ಕುಡಿಯುವ ನೀರನ್ನು ನೀರಾವರಿಗೆ ಬಳಕೆಯಾಗದಂತೆ ಕಟ್ಟೆಚ್ಚರ ವಹಿಸುವಂತೆ ತಿಳಿಸಿದರು.

ನಾರಾಯಣಪುರ ಜಲಾಶಯದಿಂದ 4.3 ಹಾಗೂ 1.7 ಟಿಎಂಸಿ ನೀರನ್ನು ಕುಡಿಯುವ ನೀರಿಗಾಗಿ ಕಾಯ್ದಿರಿಸಲಾಗಿದೆ. ಕಾಲುವೆಗಳ ಮೂಲಕ 1.1 ಟಿಎಂಸಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಪಟ್ಟಣ ಪಂಚಾಯತ್​ಗಳಿಗೆ ಬರುವ ಜೂನ್​&ಜುಲೈವರೆಗೆ ಕುಡಿಯುವ ನೀರು ಪೂರೈಸಲು 1.13 ಟಿಎಂಸಿ ನೀರು ಬಳಕೆಯಾಗಲಿದ್ದು, 4.3 ಟಿಎಂಸಿ ನೀರು ಆಲಮಟ್ಟಿ ಜಲಾಶಯದಲ್ಲಿ ಕಾಯ್ದಿರಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಮುಂದಿನ ಬೇಸಿಗೆಯಲ್ಲಿ ಸಿಂದಗಿಯ ಕೆಲವು ವಾರ್ಡ್​ಗಳಲ್ಲಿ ಮಾತ್ರ ಒಂದು ವಾರಗಳ ಕಾಲ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದ್ದು, ಈ ಸಂದರ್ಭದಲ್ಲಿ ಟ್ಯಾಂಕರ್​ ಮೂಲಕ ನೀರು ಪೂರೈಸಬೇಕಾಗುತ್ತದೆ. ಕೆರೆ ತುಂಬುವ ಯೋಜನೆಯಡಿ 4.4 ಟಿಎಂಸಿ ನೀರು ಉಳಿದಿದೆ. ತುಬಚಿ& ಬಬಲೇಶ್ವರ ನೀರಾವರಿ ಯೋಜನೆಯಲ್ಲಿ 0.5 ಟಿಎಂಸಿ ನೀರು ಕಾಯ್ದಿರಿಸಲಾಗಿತ್ತು. ಆದರೆ 1.6 ಟಿಎಂಸಿ ನೀರು ಹೆಚ್ಚುವರಿಯಾಗಿ ಬಳಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಜಿ.ಪಂ. ಸಿಇಒ ರಿಷಿ ಆನಂದ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಬಿ.ಎ. ಸೌದಾಗರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net