

ಹುಬ್ಬಳ್ಳಿ : ಭಾರತವು ಜಾಗತಿಕ ಮಟ್ಟದಲ್ಲಿ ಐದನೇ ಆರ್ಥಿಕ ಶಕ್ತಿಯಾಗಿ ರೂಪುಗೊಂಡಿದೆ. 2030ನೇ ಇಸ್ವಿ ವೇಳೆಗೆ ಇದು ಎರಡನೆಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಅವಶ್ಯವಿರುವ ಎಲ್ಲ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಹುಬ್ಬಳಿ ಶಾಖೆಯ ಅಧ್ಯಕ್ಷ ಸಿಎ ಧನಪಾಲ್ ಮುನ್ನೋಳಿ ಹೇಳಿದರು.
ಅವರು ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದ ಸರ್ಕಾರಿ ಪದವಿಪೂರ್ವ ವಿಜ್ಞಾನ ಕಲಾ ಹಾಗೂ ವಾಣಿಜ್ಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಸಿಎ ಕೋರ್ಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.
ಸೇವಾ ಕ್ಷೇತ್ರವೂ ಬಹಳ ದೊಡ್ಡ ಪ್ರಮಾಣದಲ್ಲಿ ವಿಸ್ತಾರ ಗೊಳ್ಳುತ್ತಿದೆ. ಸೇವಾ ರಫ್ತು ವಲಯವು ಸಹ ದೇಶದ ಬೊಕ್ಕಸಕ್ಕೆ ಅಪಾರ ಪ್ರಮಾಣದ ವಿದೇಶ ವಿನಿಮಯವನ್ನು ಗಳಿಸಿಕೊಡುತ್ತಿದೆ .
ಈ ಸೇವಾ ಕ್ಷೇತ್ರದಲ್ಲಿ ಭಾರತದ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆ ಉತ್ತೀರ್ಣಗೊಂಡ ಅಭ್ಯರ್ಥಿಗಳು ವಿದೇಶಗಳಲ್ಲಿ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಸೇವೆ ಸಲ್ಲಿಸಿ, ಅಪಾರ ಪ್ರಮಾಣದಲ್ಲಿ ವಿದೇಶಿ ವಿನಿಮಯ ಹಣವು ಭಾರತಕ್ಕೆ ಹರಿದು ಬರುವಂತೆ ಮಾಡಲು ಶ್ರಮಿಸುತ್ತಿದ್ದಾರೆ ಎಂದರು. ಸಿಎ ಪರೀಕ್ಷೆ ಯ ಪ್ರವೇಶ ಹಾಗೂ ಪರೀಕ್ಷೆ ಪ್ರಕ್ರಿಯೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಸಿಎ ಕೋರ್ಸ್ ಆಯ್ಕೆ ಮಾಡಿಕೊಂಡು ಪಾಸ್ ಆಗಿ, ಉನ್ನತ ಮಟ್ಟದ ಜೀವನ ನಡೆಸುವಂತೆ ಸಲಹೆ ನೀಡಿದರು.
ಹಿರಿಯ ಲೆಕ್ಕ ಪರಿಶೋಧಕರಾದ ಸಿಎ ವೈ.ಎಂ. ಖಟಾವಕರ ಅವರು, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಿಎ ಪಠ್ಯಕ್ರಮದಲ್ಲಿ ಆದ ಬದಲಾವಣೆ ಕುರಿತು ಮಾಹಿತಿ ನೀಡಿದರು.
ಪ್ರಾಚಾರ್ಯ ಕೋರಿ ಶೆಟ್ಟರ ಪ್ರಾಸ್ತವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಅನಿಲ ಕುಮಾರ, ಅಜಿತ ಸಾತಣ್ಣವರ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಭಾರಿ ಪ್ರಾಂಶುಪಾಲ ಬಿ.ಎಚ್. ಪಾಟೀಲ ಸ್ವಾಗತಿಸಿದರು. ವಿದ್ಯಾರ್ಥಿನಿ ನಂದಿತಾ ನಿರೂಪಿಸಿದರು. ಉಪನ್ಯಾಸಕಿ ಶೈಲೇಶ್ರಿ ವಂದಿಸಿದರು.