

ಚಾಮರಾಜನಗರ: ಸಂಯುಕ್ತ ಬೇಸಾಯ ಸಹಕಾರ ಸಂಘದ ಹೆಸರಿನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಮತ್ತು ಅವ್ಯವಹಾರಗಳನ್ನು ಬಯಲಿಗೆಳೆಯುವುದರ ಜತೆಗೆ ಲಾನುಭವಿಗಳಿಗೆ ಜಮೀನು ಖಾತೆ ಮಾಡಿಕೊಡುವಂತೆ ಕೋರಿ ತಾಲೂಕಿನ ಮೂಡಹಳ್ಳಿ ಹರಿಜನ ವ್ಯವಸಾಯ ಕಾಲನಿಯ ಲಾನುಭವಿಗಳು ಬುಧವಾರ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಮನವಿ ಸಲ್ಲಿಸಿದರು.
1963-64ನೇ ಸಾಲಿನಲ್ಲಿ ಅಂದಿನ ರಾಜ್ಯ ಸರ್ಕಾರವು ಚಾಮರಾಜನಗರದ ಸುತ್ತಮುತ್ತಲ ಹಳ್ಳಿಗಳಾದ ರಾಮಸಮುದ್ರ, ಬಸವನಪುರ, ಚಾಮರಾಜನಗರ ಸೇರಿದಂತೆ ಇತರ ಭಾಗಗಳಲ್ಲಿ ಕಡು ಬಡತನದಲ್ಲಿ ವಾಸಿಸುತ್ತಿದ್ದ ಆದಿಜಾಂಬವ, ಲಂಬಾಣಿ ಹಾಗೂ ಇತರ ಜನಾಂಗದ ಒಟ್ಟು 112 ಲಾನುಭವಿಗಳನ್ನು ಗುರುತಿಸಿತ್ತು.
ಇವರಿಗೆ ಚಾಮರಾಜನಗರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸಿರುವ ರಸ್ತೆಯ ಪಕ್ಕದಲ್ಲಿ ಸುಮಾರು 600 ಎಕರೆ ಅರಣ್ಯ ಪ್ರದೇಶವನ್ನು ಅರಣ್ಯೇತರ ಭೂಮಿಯಾಗಿ ಪರಿವರ್ತಿಸಿ ಅಂದಿನ ಮೈಸೂರು ಜಿಲ್ಲೆಯ ವಿಶೇಷ ಭೂಸ್ವಾದೀನಾಧಿಕಾರಿಗಳ ಆದೇಶದ ಮೇರೆಗೆ 112 ಕುಟುಂಬಗಳಿಗೆ ವ್ಯವಸಾಯ ಉದ್ದೇಶಕ್ಕಾಗಿ ನೀಡಲಾಯಿತು. ಇದರ ಸಂಪೂರ್ಣ ಜವಾಬ್ದಾರಿಯನ್ನು ಸಂಯುಕ್ತ ಬೇಸಾಯ ಸಹಕಾರ ಸಂಘದ ಸುಪರ್ದಿಗೆ ವಹಿಸಿ ಎಲ್ಲರೂ 600 ಎಕರೆ ಪ್ರದೇಶದಲ್ಲಿ ಸಾಮೂಹಿಕ ವ್ಯವಸಾಯ ಮಾಡಿ ಒಟ್ಟಿಗೆ ಹಂಚಿಕೊಂಡು ಜೀವನ ನಡೆಸಲು ಮಾರ್ಗದರ್ಶನ ನೀಡಲಾಗಿತ್ತು.
ಆದರೆ ಸಂಯುಕ್ತ ಬೇಸಾಯ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸದರಿ ಸೊಸೈಟಿಯನ್ನು ತಮಗಿಷ್ಟ ಬಂದಂತೆ ದುರುಪಯೋಗಪಡಿಸಿಕೊಂಡು ಬಡ ಲಾನುಭವಿಗಳಿಗೆ ಅನ್ಯಾಯ ಮಾಡಿದ್ದಾರೆ. ಇದನ್ನು ಸರಿಪಡಿಸಿಕೊಡಬೇಕೆಂದು ಒತ್ತಾಯಿಸಿದರು.
ನಗರಸಭಾ ಸದಸ್ಯ ಮಹದೇವಯ್ಯ, ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜು, ಪುಣಜನೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಎಚ್.ಮೂರ್ತಿ, ಡಾ.ಬಾಬುಜಗಜೀವನರಾಂ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಆರ್.ಎನ್.ಶಿವಣ್ಣ, ಆರ್.ಎನ್.ಮಹೇಶ್, ಕಾಂತುನಾಯಕ, ಮುತ್ತುನಾಯಕ, ವೆಂಟಕೇಶ್ ಇತರರು ಹಾಜರಿದ್ದರು.