

ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪತ್ರಿಕೆಗಳು ಅತ್ಯುತ್ತಮ ಸಾಧನವಾಗಿದ್ದು, ವಿದ್ಯಾರ್ಥಿಗಳು ದಿನ ಪತ್ರಿಕೆಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಸಲಹೆ ನೀಡಿದರು.
ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಕ್ರೀಡಾ ವೇದಿಕೆಯ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ತಮ್ಮ ಮಕ್ಕಳು ಶಿಕ್ಷಣ ಪಡೆದು, ಉತ್ತಮ ಉದ್ಯೋಗ ಸೇರಲಿ ಎಂದು ಪೋಷಕರು ನಿಮ್ಮನ್ನು ಓದಿಸುತ್ತಿದ್ದಾರೆ. ಹಾಗಾಗಿ, ವಿದ್ಯಾರ್ಥಿಗಳ ಕಷ್ಟಪಟ್ಟು ಓದಿ ಪೋಷಕರ ಕನಸನ್ನು ನನಸು ಮಾಡಬೇಕು. ಜತೆಗೆ ಮೊಬೈಲ್ ಫೋನ್‌ಗಳನ್ನು ಅಗತ್ಯಕ್ಕೆ ಅಷ್ಟೇ ಬಳಕೆ ಮಾಡಬೇಕು ಎಂದು ತಿಳಿಸಿದರು.
ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟು ಡಾ.ಎಂ.ಆರ್.ಸವಿತಾ ಪ್ರಶಾಂತ್ ಮಾತನಾಡಿ, ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆ ಅತ್ಯುತ್ತಮ ಸಾಧನವಾಗಿದೆ. ಸಂವಹನ ಕೌಶಲ್ಯ ಉತ್ತಮ ಪಡಿಸಿಕೊಂಡರೇ ಅದು ವೃತ್ತಿ ಜೀವನಕ್ಕೆ ಸಹಾಯಕವಾಗುತ್ತದೆ ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ಮಾತನಾಡಿ, ರಾಜೇಂದ್ರ ಶ್ರೀಗಳ ದೂರದೃಷ್ಟಿಯ ಪ್ರತಿಲವಾಗಿ ಮಹಿಳಾ ಕಾಲೇಜನ್ನು ನಿರ್ಮಾಣ ಮಾಡಿದರು. ಅದರಿಂದ ಲಕ್ಷಾಂತರ ಹೆಣ್ಣುಮಕ್ಕಳ ಬದುಕಿಗೆ ದಾರಿದೀಪವಾಗಿದ್ದಾರೆ ಎಂದರು.
ಪ್ರಾಂಶುಪಾಲರಾದ ಎಂ.ಪಿ. ರಾಜೇಶ್ವರಿ, ಸಾಂಸ್ಕೃತಿಕ ಹಾಗೂ ಸಾಹಿತ್ಯಕ ವೇದಿಕೆಯ ಸಂಚಾಲಕ ಎಂ.ವಿ. ಯೋಗೀಶ್ ಕುಮಾರ್, ಕ್ರೀಡಾ ವೇದಿಕೆ ಸಂಚಾಲಕ ಎಂ. ಶಿವಕುಮಾರಸ್ವಾಮಿ, ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಬಿ. ಶ್ರೀಧರ್, ಉಪನ್ಯಾಸಕರಾದ ಕೆ. ಜ್ಯೋತಿಪ್ರಕಾಶ್, ಎಂ.ಎಸ್. ದಿವ್ಯಶ್ರೀ, ಬಿ.ಎಂ.ಗುರುಸ್ವಾಮಿ, ಡಾ.ಡಿ.ಎಂ.ಮಹೇಂದ್ರಮೂರ್ತಿ ಇದ್ದರು.