

ವಿಜಯವಾಣಿ ಸುದ್ದಿಜಾಲ ಧಾರವಾಡ
ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಗಳ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ನಿಗದಿಪಡಿಸಿರುವ ಅನುದಾನವನ್ನು ಅನುಮೋದಿತ ಕ್ರಿಯಾಯೋಜನೆ ಅನುಸಾರ ಬಳಕೆ ಮಾಡಿ, ಶೇ. 100ರಷ್ಟು ಪ್ರಗತಿ ಸಾಧಿಸಿ, ಅಧಿಕಾರಿಗಳು ವರದಿ ನೀಡಬೇಕು ಎಂದು ಜಿಲ್ಲಾ ಸಮಿತಿ ಅಧ್ಯಕ್ಷ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ 2023-24ನೇ ಸಾಲಿನ ನವೆಂಬರ್-2023 ರ ಅಂತ್ಯದವರೆಗಿನ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿನ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಉಪಯೋಜನೆಗಳಡಿ ಬಿಡುಗಡೆ ಆಗಿರುವ ಮೊದಲ ಕಂತಿನ ಅನುದಾನವನ್ನು ಪೂರ್ಣವಾಗಿ ಬಳಸದಿರುವುದು ಕಂಡುಬರುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಎಸ್‌ಸಿಎಸ್‌ಎ ಮತ್ತು ಟಿಎಸ್‌ಎ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ನಿಷ್ಕಾಳಜಿ ತೋರುವ ಅಧಿಕಾರಿಗಳ ಮೇಲೆ ನಿಯಮಾನುಸಾರ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ ವಿಳಂಬ ಸಲ್ಲದು. ಸಂಬಂಧಿಸಿದ ಜನಪ್ರತಿನಿಧಿಗೆ ನಿಯಮಾನುಸಾರ ಪಟ್ಟಿ ಸಲ್ಲಿಸಿ ಗುರಿ ಅನುಸಾರ, ಪ್ರಗತಿ ಸಾಧಿಸುವುದು ಆಯಾ ಇಲಾಖೆ ಅಧಿಕಾರಿಗಳ ಜವಾಬ್ದಾರಿ. ಇಲಾಖೆ ಯೋಜನೆಗಳಿಗೆ ಸರ್ಕಾರದಿಂದ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆಯಾಗಿ ಕಾಮಗಾರಿಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳುವಂತೆ ಮಾಡಬೇಕು. ಜನವರಿ ಅಂತ್ಯದೊಳಗೆ ಪ್ರಸಕ್ತ ಸಾಲಿನ ನಿಗದಿತ ಗುರಿ ಸಾಧಿಸಿ, ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಮಯದಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಜರುಗಿಸಿದ ಜಿಲ್ಲಾಧಿಕಾರಿ, ಜಾತಿ ನಿಂದನೆ, ದೌರ್ಜನ್ಯ ಹಾಗೂ ಇತರ ಪ್ರಕರಣ, ಸಮಸ್ಯೆಗಳ ಕುರಿತು ಸಮಿತಿ ಸದಸ್ಯರೊಂದಿಗೆ ಚರ್ಚಿಸಿ, ಪರಿಹಾರ ಕ್ರಮ ಜರುಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಉಪ ಪೊಲೀಸ್ ಆಯುಕ್ತ ರಾಜೀವ್ ಎಂ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಬರಮನಿ, ಜಿಪಂ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು.
ಸಮಾಜ ಕಲ್ಯಾಣ ಇಲಾಖೆ ಅಪರ ನಿರ್ದೇಶಕ ಅಲ್ಲಾಭಕ್ಷ ಎಂ.ಎಸ್. ಸ್ವಾಗತಿಸಿದರು.