

ಮಡಿಕೇರಿ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ದೇವಾಲಯದ ಆವರಣದಲ್ಲಿ ೩೩ನೇ ವರ್ಷದ ಮಕರ ಸಂಕ್ರಾಂತಿ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.
ಶನಿವಾರ ಬೆಳಗ್ಗೆ ೬.೩೦ ಗಂಟೆಗೆ ನಿರ್ಮಾಲ್ಯ ವಿಸರ್ಜನೆ, ಉಷಾಪೂಜೆ, ನಂತರ ಮುತ್ತಪ್ಪ ಮತ್ತು ಸುಬ್ರಹ್ಮಣ್ಯ ದೇವರ ಪೂಜೆ, ೭.೩೦ರಿಂದ ಪಂಚಾಮೃತ ಅಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕ, ಎಳನೀರಭಿಷೇಕ, ಪುಷ್ಪಾರ್ಚನೆ ನಡೆಯಿತು. ೮.೩೦ಕ್ಕೆ ಕುಟ್ಟಿಚಾತನ್ ವೆಳ್ಳಾಟಂ, ಮುತ್ತಪ್ಪ ವೆಳ್ಳಾಟಂ, ಗುಳಿಗ ವೆಳ್ಳಾಟಂ ನಡೆಯಿತು.
ಆಯ್ಯಪ್ಪ ದೇವರ ಅಲಂಕಾರ ಪೂಜೆ, ೧೧ ಗಂಟೆಗೆ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಸಂಜೆ ಭಜನೆ, ಅಲಂಕಾರ ಪೂಜೆ ಮತ್ತು ಪಡಿಪೂಜೆ ಹಾಗೂ ರಾತ್ರಿ ದೀಪಾರಾಧನೆಯ ಬಳಿಕ ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ನೂರಾರು ಭಕ್ತರು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಶ್ರೀ ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ಸುಧೀರ್, ದೇವಾಲಯದ ಸ್ಥಾಪಕಾಧ್ಯಕ್ಷ ಡಾ.ಮನೋಹರ್ ಜಿ.ಪಾಟ್ಕರ್, ಅಯ್ಯಪ್ಪ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಸುರೇಶ್, ಉತ್ಸವ ಸಮಿತಿ ಅಧ್ಯಕ್ಷ ವಿನೋದ್, ಪ್ರಮುಖರಾದ ಟಿ.ಆರ್.ವಾಸುದೇವ್ ಮತ್ತಿತರರು ಇದ್ದರು.