14ರಿಂದ ಸಿಗಂದೂರಲ್ಲಿ ಮಕರ ಸಂಕ್ರಮಣ ಜಾತ್ರೋತ್ಸವ

8 bkd 1
Published on

ಬ್ಯಾಕೋಡು: ಇಲ್ಲಿನ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಜ.14 ಮತ್ತು 15ರಂದು ಮಕರ ಸಂಕ್ರಮಣ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇವಳ ಆಡಳಿತ ಮಂಡಳಿ ತಿಳಿಸಿದೆ.

ಜ.14ರಂದು ಪ್ರಾತಃಕಾಲ 4ಕ್ಕೆ ಶ್ರೀ ಚೌಡೇಶ್ವರಿ ದೇವಿಗೆ ಮಹಾಭಿಷೇಕ, ಅಲಂಕಾರ, ಆಭರಣ ಪೂಜೆ, ಚಂಡಿಕಾ ಹೋಮ ನೆರವೇರಲಿದೆ. ಜಾತ್ರಾ ಮಹೋತ್ಸವಕ್ಕೆ ಆರ್ಯ ಈಡಿಗ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ತಿಮ್ಮೇಗೌಡ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 8ಕ್ಕೆ ರಥ ಪೂಜೆಯೊಂದಿಗೆ ದೇವಿ ಮೂಲ ಸ್ಥಾನಕ್ಕೆ ಹೊರಡಲಿದ್ದು, ಕೇರಳದ ಶಿವಗಿರಿಯ ಬ್ರಹ್ಮಶ್ರೀ ನಾರಾಯಣ ಗುರು ಮಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸ್ವಾಮೀಜಿ ಸೀಗೇ ಕಣಿವೆಯಲ್ಲಿ ಧರ್ಮ ಜ್ಯೋತಿಗೆ ಚಾಲನೆ ನೀಡಲಿದ್ದಾರೆ. ಧರ್ಮಾಧಿಕಾರಿ ಎಸ್.ರಾಮಪ್ಪ ಎಲ್ಲ ಧಾರ್ಮಿಕ ಕೈಂಕರ್ಯಗಳ ನೇತೃತ್ವ ವಹಿಸಲಿದ್ದಾರೆ.
ಮಧ್ಯಾಹ್ನ 12ಕ್ಕೆ ಜ್ಯೋತಿ ದೇವಸ್ಥಾನ ಪ್ರವೇಶಿಸಲಿದೆ. ರಂಭಾಪುರಿ ಮಹಾಸಂಸ್ಥಾನ ಮಳಲಿ ಮಠದ ಶ್ರೀ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ರಾತ್ರಿ 9.30ಕ್ಕೆ ಸಿಗಂದೂರು ಮೇಳದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಜ.15ರ ಬೆಳಿಗ್ಗೆ 5ರಿಂದ ನವ ಚಂಡಿಕಾ ಹೋಮ, ರಾತ್ರಿ 8 ಗಂಟೆಗೆ ದುರ್ಗಾ ದೀಪ ನಮಸ್ಕಾರ, ಗುರು ಪೂಜೆ, ದೇವಿ ಪಾರಾಯಣ, ರಂಗಪೂಜೆ, 8.30ರಿಂದ ಕುದ್ರೋಳಿ ಗಣೇಶ ಮತ್ತು ಬಳಗದಿಂದ ಮ್ಯಾಜಿಕ್ ಶೋ ನಡೆಯಲಿದೆ. 2 ದಿನಗಳ ಕಾಲ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net