ಮಾಕಳಿ ಬೆಟ್ಟದ ಗತವೈಭವ ಮರುಸೃಷ್ಟಿಗೆ ಸಸಿ ನಾಟಿ

makali hill
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬೆಳವಂಗಲ
ಮಾಕಳಿ ಬೆಟ್ಟದಲ್ಲಿ ಈ ಹಿಂದೆ ನಡೆಸಿದ್ದ ಸಮೀಕ್ಷೆಯಲ್ಲಿ ಮಾಕಳಿ ಬೇರು ಔಷಧ ಸಸಿ ಪ್ರಮಾಣ ತೀರ ಕಡಿಮೆಯಾಗಿದ್ದವು. ಹಾಗಾಗಿ ಬೆಟ್ಟದಲ್ಲಿ 1700ಕ್ಕೂ ಅಧಿಕ ಸಸಿ ನೆಟ್ಟು ಬೆಟ್ಟಕ್ಕೆ ಗತವೈಭವ ನೀಡಲು ಶ್ರಮಿಸಲಾಗುತ್ತಿದೆ ಎಂದು ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ್ ಹೇಳಿದರು.
ತಾಲೂಕಿನ ಮಾಕಳಿ ಬೆಟ್ಟದಲ್ಲಿ ಯುವ ಸಂಚಲನ ಮತ್ತು ಅರಣ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಕಳಿ ಬೆಟ್ಟದ ಹೆಸರಿಗೆ ಮೂಲ ಕಾರಣ ಎನಿಸಿರುವುದು ಮಾಕಳಿ ಬೇರು ಔಷಧ ಸಸಿ. ಈ ಹಿಂದೆ ಟ್ರಾನ್ಸೆಕ್ಟ್ ಸ್ಯಾಪ್ಲಿಂಗ್ ವಿಧಾನದಲ್ಲಿ ಸಸಿ ಗುರುತಿಸುವ ಸಮೀಕ್ಷೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಒಟ್ಟು 20 ಮಂದಿ ಪ್ರತ್ಯೇಕ ತಂಡಗಳಾಗಿ ತಲಾ 2 ಕಿಮೀ ಅಂತರದಲ್ಲಿ ಸಮೀಕ್ಷೆ ನಡೆಸಿದ್ದರು. ಮಾಕಳಿ ತಪ್ಪಲಿನ ಪ್ರದೇಶದಲ್ಲಿ ಕೇವಲ 24 ಮಾಕಳಿ ಸಸಿಗಳನ್ನಷ್ಟೇ ಗುರುತಿಸಲು ಸಾಧ್ಯವಾಗಿತ್ತು. ಹೀಗಾಗಿ, ಪುನಃ ಬೆಟ್ಟದಲ್ಲಿ ಮಾಕಳಿ ಸಸಿಗಳ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಯುವ ಸಂಚಲನ ತಂಡದಿಂದ ಮಾಕಳಿ ಬೇರಿನ ಪತ್ತೆ, ಬಿತ್ತನೆ ಬೀಜಗಳ ಸಂಗ್ರಹ ಪ್ರಯತ್ನ ನಡೆದಿತ್ತು. ಆ ಮೂಲಕ ದೊಡ್ಡಬಳ್ಳಾಪುರ ಅರಣ್ಯ ಇಲಾಖೆಗೆ ತಂಡದ ಮನವಿ ಭಾಗವಾಗಿ ಬಿತ್ತನೆ ಬೀಜ ಪೂರೈಸಿ, ಮಾಕಳಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ರೂಪಿಸಿದೆ. ಅಳಿವಿನಂಚಿನಲ್ಲಿರುವ ಮಾಕಳಿ ಬೇರಿನ ಗಿಡಗಳನ್ನು ಹೆಚ್ಚಿಸಿ, ಬೆಟ್ಟಕ್ಕೆ ಈ ಹಿಂದಿನಂತೆ ಔಷಧೀಯ ಹೆಗ್ಗುರುತು ಮರುಕಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಪರಿಸರ ಆಸಕ್ತ ನಾಗದಳದ ನಟರಾಜ್ ಮಾತನಾಡಿ, ಔಷಧೀಯ ಗುಣವಿರುವ ಸಾಕಷ್ಟು ಸಸಿಗಳು ಪ್ರಕೃತಿಯಲ್ಲಿವೆ. ಆದರೆ, ಇಂದಿನ ಜನರಿಗೆ ಈ ಸಸಿಗಳ ಮಹತ್ವದ ಅರಿವಿಲ್ಲ. ಹೀಗಾಗಿ, ಮಕ್ಕಳ ಮೂಲಕ ಪ್ರತಿಯೊಬ್ಬರಿಗೂ ಪ್ರಕೃತಿಯ ಮೌಲ್ಯ, ಸಸಿಗಳ ಔಷಧೀಯ ಗುಣಗಳ ಗುಟ್ಟು ತಿಳಿಸಬೇಕು. ಈ ಮೂಲಕ ಮಹತ್ವದ ಸಸಿಗಳು ಅಳಿಯದಂತೆ ಎಚ್ಚರಿಕೆ ವಹಿಸಬೇಳು. ಮುಖ್ಯವಾಗಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಎನ್ನುವ ಅಂಶ ಎಲ್ಲರಲ್ಲೂ ಮೂಡಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net