

ಹುಬ್ಬಳ್ಳಿ: ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಬಡ ರೋಗಿಗಳ ಆರೋಗ್ಯ ಸುಧಾರಣೆಗೆ ಧನ ಸಹಾಯ ಮಾಡುತ್ತಿರುವ ಮಜೇಥಿಯಾ ಟ್ರಸ್ಟ್‌ನ ಸಾಮಾಜಿಕ ಕಳಕಳಿ ಮೆಚ್ಚುವಂತದ್ದು ಎಂದು ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಹೇಳಿದರು.
ನಗರದ ಮಜೇಥಿಯಾ ಫೌಂಡೇಷನ್ ನಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.
ಮಜೇಥಿಯಾದವರು ಮಾಡುತ್ತಿರುವ ಸಮಾಜಮುಖಿ ಕಾರ್ಯಗಳು ಇತರರಿಗೂ ಮಾದರಿಯಾಗಿವೆ. ನೊಂದ ಜೀವಗಳಿಗೆ ಸಹಾಯ ಮಾಡುತ್ತಿರುವುದು ಜಿತೇಂದ್ರ ಮಜೇಥಿಯಾ ಅವರ ಸೇವಾ ಕಾರ್ಯಕ್ಕೆ ಸಾಕ್ಷಿ ಎಂದರು.
ಮಹೇಶ ಪಿಯು ಕಾಲೇಜಿನ ಪ್ರಾಚಾರ್ಯ ರಾಮಮೋಹನ ಮಾತನಾಡಿ, ಪ್ರತಿಭಾವಂತ ಬಡ ಮಕ್ಕಳಿಗೆ ಆರ್ಥಿಕ ನೆರವು ನೀಡುವುದರಿಂದ ಅವರು ಶೈಕ್ಷಣಿಕವಾಗಿ ಇನ್ನಷ್ಟು ಸಾಧನೆ ಮಾಡಲು ಅನುಕೂಲವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಜೇಥಿಯಾ ಟ್ರಸ್ಟ್ ಅಧ್ಯಕ್ಷೆ ನಂದಿನಿ ಕಶ್ಯಪ ಮಜೇಥಿಯಾ ಮಾತನಾಡಿ, ಭಾರತೀಯ ಪರಂಪರೆ, ಸಂಪ್ರದಾಯಗಳಿಂದ ಆಕರ್ಷಿತವಾಗಿರುವ ವಿದೇಶಿಯರು ಇಲ್ಲಿನ ಸಂಸತಿಯನ್ನು ಪಾಲನೆ ಮಾಡುತ್ತಿದ್ದಾರೆ. ಆದರೆ, ದೇಶದಲ್ಲಿ ಕೆಲ ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದು ವಿಷಾದದ ಸಂಗತಿ. ನಮ್ಮ ಭವ್ಯ ಪರಂಪರೆ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸುವುದು ಇಂದಿನ ಅಗತ್ಯ ಎಂದರು.
ಟ್ರಸ್ಟ್ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಪ್ರಾಸ್ತಾವಿಕ ಮಾತನಾಡಿ, ಹಲವು ವರ್ಷಗಳಿಂದ ಟ್ರಸ್ಟ್ ನಡೆಸಿಕೊಂಡು ಬಂದಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳು ಸಮಾಜದಲ್ಲಿ ಸಾಕಷ್ಟು ಪ್ರಭಾವ ಬೀರಿವೆ ಎಂದರು.
ಶ್ರೀಧರ ಜೋಶಿ ಉಪಸ್ಥಿತರಿದ್ದರು. ಡಾ. ಸುನಿಲ ಕುಕನೂರ ಸ್ವಾಗತಿಸಿದರು.