

ಹುಬ್ಬಳ್ಳಿ: ಜೀವನದಲ್ಲಿ ಎಷ್ಟೇ ಏರುಪೇರುಗಳಿದ್ದರೂ ಅದನ್ನು ಎದುರಿಸಿ ಮುನ್ನಡೆಯುವ ಶಕ್ತಿ ಮನುಷ್ಯನಲ್ಲಿದೆ. ಇದನ್ನು ಜಾಗೃತಗೊಳಿಸುವ ಕಾರ್ಯ ನಿರಂತರ ನಡೆಯಬೇಕು ಎಂದು ಮಜೇಥಿಯಾ ಫೌಂಡೇಷನ್ ಅಧ್ಯಕ್ಷೆ ನಂದಿನಿ ಕಶ್ಯಪ ಮಜೇಥಿಯಾ ಹೇಳಿದರು.
ಇಲ್ಲಿಯ ಮಜೇಥಿಯಾ ಫೌಂಡೇಷನ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸೇವಾ ಹಸ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಅಭ್ಯಾಸದ ಜತೆಗೆ ಆಟ, ಊಟ, ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಗುರು ಹಿರಿಯರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು. ಆಗ ಮಾತ್ರ ಗುರಿ ಸಾಧನೆ ಸುಲಭವಾಗಲಿದೆ ಎಂದರು.
ಅತಿಥಿಗಳಾಗಿದ್ದ ಕಿಮ್ಸ್ ಕ್ಯಾನ್ಸರ್ ವಿಭಾಗ ಮುಖ್ಯಸ್ಥ ಡಾ. ಎಂ.ಜಿ. ಗಿರಿಯಪ್ಪಗೌಡರ ಮಾತನಾಡಿ, ವಿದ್ಯಾರ್ಥಿಗಳು ಕಷ್ಟ ಪಟ್ಟು ಓದುವ ಬದಲು ಇಷ್ಟ ಪಟ್ಟು ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬೇಕು ಎಂದರು.
ಮಹಿಳಾ ವಿದ್ಯಾಪೀಠದ ಉಪಾಧ್ಯಕ್ಷೆ ಕೀರ್ತಿ ತಂಬದ, ಸಹ ಕಾರ್ಯದರ್ಶಿ ಜ್ಯೋತಿ ಜಂಗಣ್ಣವರ ಮಾತನಾಡಿದರು.
50 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬಡವರಿಗೆ ಸಹಾಯಧನ ವಿತರಿಸಲಾಯಿತು. ಬಾಲಕೃಷ್ಣ ಸರಾಫ, ನವೀನ ಮಾಲಿನ, ರೋಹನ ಗೋಂಧಕರ ಇತರರು ಇದ್ದರು.
ಅನಿತಾ ಜಡಿ, ರೇಷ್ಮಾ ತಡಕೊಡ ಸುಗಮ ಸಂಗೀತ ನಡೆಸಿಕೊಟ್ಟರು. ರಮಿಲಾ ಪ್ರಶಾಂತಿ ಮಂದಿರ ಹಾಸ್ಪೈಸ್ ಮುಖ್ಯಸ್ಥ ಡಾ. ನಾಗರಾಜ ಸಾನು ಸ್ವಾಗತಿಸಿದರು. ಮಜೇಥಿಯಾ ಫೌಂಡೇಷನ್ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಕಾರ್ಯಕ್ರಮ ನಿರೂಪಿಸಿದರು. ಸುನೀಲಕುಮಾರ ಕುಕನೂರ ವಂದಿಸಿದರು.