

ಹುಬ್ಬಳ್ಳಿ: ಸಮಾಜ ಸೇವಾ ಕಾರ್ಯಗಳಿಗೆ ಹೆಸರಾಗಿರುವ ಜಿತೇಂದ್ರ ಮಜೇಥಿಯಾ ಅವರ ಜನ್ಮದಿನ ಹಾಗೂ 75 ವಸಂತಗಳ ಸಾರ್ಥಕ ಸಂಭ್ರಮದ ನಿಮಿತ್ತ ಇಲ್ಲಿಯ ಮಜೇಥಿಯಾ ಫೌಂಡೇಷನ್ ವತಿಯಿಂದ ಅಕ್ಟೋಬರ್ 1ರಿಂದ ಐದು ದಿನಗಳವರೆಗೆ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಷನ್ ಸದಸ್ಯ ಮಂಜುನಾಥ ಭಟ್ಟ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರುಸಾವಿರ ಮಠ ಸಭಾಗೃಹದಲ್ಲಿ ಅ. 1ರಂದು ಬೆಳಗ್ಗೆ 9.30ಕ್ಕೆ ಉಚಿತ ಕೃತಕ ಕೈಕಾಲು ಜೋಡಣೆ ಶಿಬಿರ ನಡೆಯಲಿದ್ದು, ಸಚಿವ ಸಂತೋಷ ಲಾಡ್ ಕಾರ್ಯಕ್ರಮ ಉದ್ಘಾಟಿಸುವರು.
ಈಗಾಗಲೇ 175 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ 13 ವರ್ಷಗಳಿಂದ ಇಂತಹ ಶಿಬಿರ ನಡೆಸಲಾಗುತ್ತಿದೆ. ಇದುವರೆಗೆ 1300 ಜನರು ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.
ಅಂದು ಸಂಜೆ 5.30ಕ್ಕೆ ದೇಶಪಾಂಡೆನಗರದ ಗುಜರಾತ್ ಭವನದಲ್ಲಿ ವೀರ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸೇವೆಯಲ್ಲಿರುವ 25 ವೀರಯೋಧರ ಕುಟುಂಬದವರಿಗೆ ಗೌರವ ಸನ್ಮಾನ ನಡೆಯಲಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬ್ರಿಗೇಡಿಯರ್ (ನಿವೃತ್ತ) ಎಸ್.ಜಿ. ಭಾಗವತ್, ಕಾರ್ಗಿಲ್ ಯೋಧ ನವೀನ್ ನಾಗಪ್ಪ ಅತಿಥಿಗಳಾಗಿ ಪಾಲ್ಗೊಳ್ಳುವರು. ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಉಪಸ್ಥಿತರಿರುವರು ಎಂದರು.
ಕೈಗಾಡಿ ಕೊಡುಗೆ: ಫೌಂಡೇಷನ್ ಸಿಇಒ ಅಜಿತ್ ಕುಲಕರ್ಣಿ ಮಾತನಾಡಿ, ಅ. 2ರಂದು ಬೆಳಗ್ಗೆ 11ಕ್ಕೆ ಮೂರುಸಾವಿರ ಮಠ ಅವರಣದಲ್ಲಿ ಹುಬ್ಬಳ್ಳಿಯ 22 ಕಾಮಿರ್ಕರಿಗೆ ಉಚಿತ ತಳ್ಳುವ ಕೈಗಾಡಿ ವಿತರಣೆ ಮಾಡಲಾಗುವುದು. ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಪ್ರಸಾದ ಅಬ್ಬಯ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಪೌಷ್ಟಿಕ ಆಹಾರ ವಿತರಣೆ: ಅ. 3ರಂದು ಬೆಳಗ್ಗೆ 10ಕ್ಕೆ ಆರ್.ಎನ್. ಶೆಟ್ಟಿ ರಸ್ತೆಯ ರೋಟರಿ ಸ್ಲೋ ರ್ಲನರ್ ಸ್ಕೂಲ್ನಲ್ಲಿ ಉಚಿತ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮ ನಡೆಯಲಿದೆ. ಶಾಸಕ ಮಹೇಶ ಟೆಂಗಿನಕಾಯಿ ಸಮಾರಂಭ ಉದ್ಘಾಟಿಸುವರು.
ಸೇವಾ ಹಸ್ತ: ಅಕ್ಟೋಬರ್ 4ರಂದು ಸಂಜೆ 4.30ಕ್ಕೆ ಐಬಿ ರಸ್ತೆಯಲ್ಲಿರುವ ಮಜೇಥಿಯಾ ಫೌಂಡೇಷನ್ ಸಭಾಭವನದಲ್ಲಿ ಸೇವಾ ಹಸ್ತ ಕಾರ್ಯಕ್ರಮ ನಡೆಯಲಿದ್ದು, ಇಬ್ಬರು ಬಡ ವಿದ್ಯಾಥಿರ್ಗಳ ದತ್ತು, ಪಿಎಚ್.ಡಿ, ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾಥಿರ್ಗಳಿಗೆ ಲ್ಯಾಪ್ಟಾಪ್ ವಿತರಣೆ ಹಾಗೂ ವಿಶೇಷ ಚೇತನರಿಗೆ ವ್ಹೀಲ್ ಚೇರ್ ವಿತರಣೆ ಮಾಡಲಾಗುವುದು. ಫೌಂಡೇಷನ್ ಅಧ್ಯಕ್ಷೆ ನಂದಿನಿ ಕಶ್ಯಪ ಮಜೇಥಿಯಾ ಉಪಸ್ಥಿತರಿರುವರು ಎಂದರು.
ಚೇತನೋತ್ಸವ: ಅ. 5ರಂದು ಬೆಳಗ್ಗೆ 10ಕ್ಕೆ ಗಬ್ಬೂರ ಬಳಿಯ ವಿಶ್ವಧರ್ಮ ಅಂಗವಿಕಲ ಚೇತನ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಚೇತನೋತ್ಸವ ಏರ್ಪಡಿಸಲಾಗಿದೆ. ಉದ್ಯಮಿ ವಿಜಯಕುಮಾರ ಶೆಟ್ಟರ ಅತಿಥಿಗಳಾಗಿ ಪಾಲ್ಗೊಳ್ಳುವರು. ಸದಸ್ಯ ಸುಭಾಸಸಿಂಗ್ ಜಮಾದಾರ, ಸುನೀಲ್ ಕುಕನೂರು ಗೋಷ್ಠಿಯಲ್ಲಿದ್ದರು.