ವಿಕಲಾಂಗರಿಗೆ ನವಜೀವನ ನೀಡಿದ ಮಜೇಥಿಯಾ, ಕೃತಕ ಕೈಕಾಲು ಜೋಡಣೆ ಶಿಬಿರ ಉದ್ಘಾಟಿಸಿದ ನ್ಯಾ. ಆರ್.ಎಸ್. ಚಿನ್ನಣ್ಣವರ

IMG_20231203_210904_195.jpg
Published on

ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠದ ಸಭಾಂಗಣವು ಭಾನುವಾರ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಇನ್ನೊಬ್ಬರ ಆಸರೆಯಲ್ಲಿ ಇಲ್ಲಿಗೆ ತೆವಳುತ್ತ, ಕುಂಟುತ್ತ ಬಂದವರು ವಾಪಸ್ ಹೋಗುವಾಗ ಮಂದಹಾಸ ಬೀರುತ್ತ ನಡೆದುಕೊಂಡು ಹೋದರು. ಇವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ ಹೊಸ ಚೈತನ್ಯ ಮೂಡಿತ್ತು. ತಮ್ಮ ಜೀವನವನ್ನು ಮತ್ತೆ ಪಡೆದ ಧನ್ಯತಾಭಾವ ಅರಳಿತ್ತು.

ಇವರ ಬದುಕಿಗೆ ಹೊಸ ದಿಸೆ ನೀಡಿದ ಮಜೇಥಿಯಾ ಫೌಂಡೇಷನ್ ಕಾರ್ಯಕ್ಕೆ ಮನದಲ್ಲೇ ಕೃತಜ್ಞತೆ ಸಲ್ಲಿಸಿ ಮನೆಯತ್ತ ಹೆಜ್ಜೆ ಹಾಕಿದರು.

ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ನಗರದ ಮಜೇಥಿಯಾ ಫೌಂಡೇಷನ್ ವತಿಯಿಂದ ಭಾನುವಾರ ಆಯೋಜಿಸಿದ್ದ 103 ಲಾನುಭವಿಗಳಿಗೆ ಕೃತಕ ಕೈ ಕಾಲು ಜೋಡಣೆ ಉಚಿತ ಶಿಬಿರ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಈ ಸಮಾರಂಭದ ಉದ್ಘಾಟನೆ ನೆರವೇರಿಸಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಆರ್.ಎಸ್. ಚಿನ್ನಣ್ಣವರ ಅವರು, ಅವಘಡದಲ್ಲಿ ಅಂಗಾಂಗ ಕಳೆದುಕೊಂಡ ಅನೇಕರಿಗೆ ಕೃತಕ ಕೈಕಾಲು ನೀಡುವ ಮೂಲಕ ಮಜೇಥಿಯಾ ಫೌಂಡೇಷನ್ನವರು ವಿಕಲಾಂಗರಿಗೆ ಹೊಸ ಜೀವನ ಕಲ್ಪಿಸಿ ಕೊಟ್ಟಿದ್ದಾರೆ.

ಕೈ ಇಲ್ಲದವರಿಗೆ ವರ್ಕಿಂಗ್ ಹ್ಯಾಂಡ್ ನೀಡಿರುವುದು ವಿಶೇಷವಾಗಿದೆ. ವಿಕಲಾಂಗರು ಎನ್ನುವ ಬದಲು ವಿಶೇಷ ಚೇತನರು ಎನ್ನುವುದು ಸೂಕ್ತ. ಇವರಿಗಾಗಿ ಹಲವು ಕಾನೂನುಗಳು ಇದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಸಂತೋಷ ಬಿರಾದಾರ, ಸೇವಾ ಕಾರ್ಯಗಳ ಮುಖಾಂತರವೇ ಮಜೇಥಿಯಾ ಫೌಂಡೇಷನ್ ಸಮಾಜದಲ್ಲಿ ಗುರುತಿಸಿಕೊಂಡಿದೆ. ಅಂಗವಿಕಲರು ಸ್ವ ಇಚ್ಚೆಯಿಂದ ತಮ್ಮ ಕೆಲಸ ಕಾರ್ಯ ಮಾಡಿಕೊಳ್ಳುವದಷ್ಟೇ ಅಲ್ಲ, ದುಡಿಯಲು ಶಕ್ತರಾಗುವಂತೆ ಮಾಡುವ ಕಾರ್ಯ ಇಲ್ಲಿ ನಡೆಯುತ್ತಿದೆ. ಇದು ಹೃದರ್ಯಸ್ಪರ್ಷಿ ಕಾರ್ಯಕ್ರಮ ಎಂದರು.

ವಿಭವ ಸಮೂಹ ಸಂಸ್ಥೆಯ ಸಿಇಒ ಎಚ್.ಎನ್. ನಂದಕುಮಾರ ಮಾತನಾಡಿ, ಸಂಪಾದನೆ ಮಾಡಿದ್ದರಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ದಾನ ಮಾಡುತ್ತಿರುವ ಮಜೇಥಿಯಾ ಅವರ ಕಾರ್ಯ ನಿಜಕ್ಕೂ ಶ್ಲಾನೀಯ, ಅವರ ಸೇವಾ ಕಾರ್ಯಕ್ಕೆ ತಾವೂ ಕೈಜೋಡಿಸುವುದಾಗಿ ವಾಗ್ದಾನ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಮಾತನಾಡಿ, ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೈಕಾಲು ಕಳೆದುಕೊಳ್ಳುವವರು ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ಬಗ್ಗೆ ಸಮಾಜ ಹಾಗೂ ಸರ್ಕಾರ ಚಿಂತನೆ ಮಾಡಬೇಕಾಗಿದೆ. ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಡಾ. ಸಂದೀಪ ನೀರಲಗಿ, ಕೃತಕ ಕೈಕಾಲುಗಳನ್ನು ಬಳಸುವ ಬಗೆಯನ್ನು ಪ್ರಾತ್ಯಕೆ ಮೂಲಕ ವಿವರಿಸಿದರು.

ಶಿಬಿರದ ಮುಖ್ಯಸ್ಥ ಡಾ. ಮಂಜುನಾಥ ಭಟ್ ಮಾತನಾಡಿ, ಇದುವರೆಗೂ ೌಂಡೇಷನ್ ವತಿಯಿಂದ 1400 ಜನರಿಗೆ ಕೃತಕ ಕೈಕಾಲು ನೀಡಲಾಗಿದೆ. ರೈತರು, ಪೇಂಟರ್ ಮುಂತಾದ ಕೆಲಸ ಮಾಡುವ ಅನೇಕರು ಮರಳಿ ತಮ್ಮ ಕೆಲಸ ಕಾರ್ಯಗಳಿಗೆ ತೆರಳಿದ್ದಾರೆ ಎಂದರು.

ಫೌಂಡೇಷನ್ನ ಕಶ್ಯಪ್ ಮಜೇಥಿಯಾ, ಡಾ. ವಿ.ಬಿ. ನಿಟಾಲಿ, ಪ್ರಹ್ಲಾದರಾವ್, ಅಮೃತಭಾಯ್ ಪಟೇಲ್, ಡಾ. ನಾಗರಾಜರಾವ ಸಾನು, ಇತರರು ಪಾಲ್ಗೊಂಡಿದ್ದರು. ಕಾರ್ಯದಶಿರ್ ಅಮರೇಶ ಹಿಪ್ಪರಗಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net