ಮಜೇಥಿಯಾ ಫೌಂಡೇಷನ್ ಸೇವಾ ಕಾರ್ಯ ಶ್ಲಾಘನೀಯ

h9-majetiya
Published on

ಹುಬ್ಬಳ್ಳಿ: ಸಮಾಜಮುಖಿ ಕೆಲಸಗಳಲ್ಲಿ ಕಳೆದ 16 ವರ್ಷಗಳಿಂದ ತನ್ನನ್ನು ತಾನು ತೊಡಗಿಸಿಕೊಂಡಿರುವ ಮಜೇಥಿಯಾ ಫೌಂಡೇಷನ್ ಇಂದಿಗೂ ತನ್ನದೇ ಆದ ಜನೋಪಯೋಗಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನ ಮೆಚ್ಚುಗೆ ಗಳಿಸಿದೆ ಎಂದು ಸಮಾಜ ಸೇವಕಿ ಗಾಯತ್ರಿ ಪ್ರಭು ಹೇಳಿದರು.
ನಗರದ ಮಜೇಥಿಯಾ ಫೌಂಡೇಷನ್ ಸಭಾ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಆರೋಗ್ಯ, ಶಿಕ್ಷಣ, ಅಂಗವಿಕಲರಿಗೆ ನೆರವಿನ ಹಸ್ತ ಚಾಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರ ಉನ್ನತಿಗಾಗಿ ಮುಖ್ಯ ಗುರಿಯಾಗಿಸಿಕೊಂಡಿರುವ ಮಜೇಥಿಯಾ ಫೌಂಡೇಷನ್ ಸೇವೆ ಅರ್ಥಪೂರ್ಣವಾಗಿದೆ ಎಂದರು.
ಸಮಾಜ ಸೇವಕಿ ಜ್ಯೋತಿ ನಡಕಟ್ಟಿ ಮಾತನಾಡಿ, ಇನ್ನೊಬ್ಬರ ಜೀವನಕ್ಕೆ ಆಸರೆಯಾಗುವ ಕಾರ್ಯವನ್ನು ಫೌಂಡೇಷನ್ ಮಾಡುತ್ತಿದೆ. ಎಲ್ಲ ಕ್ಷೇತ್ರದಲ್ಲೂ ಅಪಾರವಾದ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಮಜೇಥಿಯಾ ಫೌಂಡೇಷನ್ ಅಧ್ಯಕ್ಷೆ ನಂದಿನಿ ಕಶ್ಯಪ್ ಮಜೇಥಿಯಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಜೇಥಿಯಾ ಫೌಂಡೇಷನ್ ಸಂಸ್ಥೆಯ ಸೇವೆ ದಿನದಿಂದ ದಿನಕ್ಕೆ ಇಮ್ಮಡಿಯಾಗುತ್ತಿದೆ. ಕಷ್ಟದಲ್ಲಿ ನೊಂದಿರುವ ಕುಟುಂಬಗಳಿಗೆ ಬೆಳಕಾಗಬೇಕೆಂಬ ಉದ್ದೇಶವನ್ನು ಫೌಂಡೇಷನ್ ಹೊಂದಿದೆ ಎಂದರು.
ಫೌಂಡೇಷನ್ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಟ್ರಸ್ಟಿಗಳಾದ ಎಚ್.ಆರ್. ಪ್ರಹ್ಲಾದರಾವ್, ಅಮೃತಭಾಯ್‌ಪಟೇಲ್, ಸದಾನಂದ ಕಾಮತ, ಕೇವಲ ಲುನಕರ, ನಾಗರಾಜ ನಡಕಟ್ಟಿ, ಶಂಕರ ಕಮಟೆ ಮಾತನಾಡಿದರು.
ಅಂಗವಿಕರು, ರೈತ ಮಹಿಳೆಯರು, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕೃತಕ ಕಾಲು ವಿತರಿಸಲಾಯಿತು. ಅನಾರೋಗ್ಯದಿಂದ ಬಳಲುತ್ತಿರುವರಿಗೆ ಸಹಾಯ ಹಸ್ತ ಚಾಚಲಾಯಿತು. 20 ಜನರಿಗೆ ಅತಿಥಿಗಳು ಸಹಾಯಹಸ್ತದ ಚೆಕ್ ವಿತರಿಸಿದರು.
ಸಿಇಒ ಸುನೀಲಕುಮಾರ ಕುಕನೂರ ಸ್ವಾಗತಿಸಿದರು. ನವೀನ ಮಾಲಿನ, ರೋಹನ ಗೊಂದಕರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net