

ಕಾರವಾರ: ಚಾಲಕನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಮಾಜಾಳಿ ತನಿಖಾ ಠಾಣೆಯ ಅಬಕಾರಿ ನಿರೀಕ್ಷಕ ಸದಾಶಿವ ಕೊರ್ತಿ ಅವರನ್ನು ಹಾಸನ ಜಿಲ್ಲೆಗೆ ಹಾಗೂ ಪೇದೆ ಹೇಮಚಂದ್ರ ಅವರನ್ನು ರಾಯಚೂರು ಜಿಲ್ಲೆಗೆ ವರ್ಗಾಯಿಸಲಾಗಿದೆ.
ಹಾಸನದ ವುಡ್ ಫೆಕ್ಕರ್ ಡಿಸ್ಟಿಲರೀಸ್‌ನಲ್ಲಿರುವ ಅಬಕಾರಿ ಅಧೀಕ್ಷಕರ ಕಚೇರಿಗೆ ಸದಾಶಿವ ಕೊರ್ತಿ, ಸಿಂಧನೂರಿನ ಕೆಎಸ್‌ಬಿಸಿಎಲ್ ಡಿಪೋಕ್ಕೆ ಹೇಮಚಂದ್ರ ಅವರನ್ನು ವರ್ಗಾಯಿಸಿ ಅಬಕಾರಿ ಆಯುಕ್ತರು ಶನಿವಾರ ಆದೇಶಿಸಿದ್ದಾರೆ.
ಗೋವಾದಿಂದ ಕೇರಳಕ್ಕೆ ವಾಟರ್ ಫಿಲ್ಟರ್ ತುಂಬಿಕೊಂಡು ಹೊರಟ ಲಾರಿಯ ಚಾಲಕನ ಮೇಲೆ ಅ.15 ರ ರಾತ್ರಿ ಈ ಇಬ್ಬರು ಅಬಕಾರಿ ನೌಕರರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಚಾಲಕ ಬೆಂಗಳೂರು ಮೂಲದ ಕುಮಾರ್ ತನ್ನ ಮೇಲೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ತನ್ನ ಮೇಲೆ ಮಾಜಾಳಿ ತನಿಖಾ ಠಾಣೆಯಲ್ಲಿ ಹಲ್ಲೆ ನಡೆದಿದೆ ಎಂದು ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇಬ್ಬರು ಅಬಕಾರಿ ನೌಕರರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಅ.21 ರಂದು ಪ್ರತಿಭಟನೆ ನಡೆಸುವುದಾಗಿ ರಾಷ್ಟ್ರೀಯ ಲಾರಿ ಅಸೋಸಿಯೇಶನ್ ಹಾಗೂ ರಾಜ್ಯ ಲಾರಿ ಅಸೋಸಿಯೇಶನ್ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಬಕಾರಿ ಉಪ ಆಯುಕ್ತರು ಹಾಗೂ ಎಸ್‌ಪಿ ವರದಿಯನ್ನು ಆಧರಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಬ್ಬರನ್ನೂ ವರ್ಗಾವಣೆ ಮಾಡಲಾಗಿದೆ ಎಂದು ಅಬಕಾರಿ ಆಯುಕ್ತರು ಜ್ಞಾಪನಾ ಪತ್ರದಲ್ಲಿ ತಿಳಿಸಿದ್ದಾರೆ.
ಗೋವಾದಿಂದ ಸಂಶಯಾಸ್ಪದವಾಗಿ ಸಾಗಿಸುತ್ತಿದ್ದ ಸ್ಪಿರಿಟ್ ಲಾರಿಯೊಂದನ್ನು ಸದಾಶಿವ ಕೊರ್ತಿ 2023 ರಲ್ಲಿ ವಶಕ್ಕೆ ಪಡೆದಿದ್ದರು. ಈ ಸಂಬಂಧ ಶಾಸಕ ಸತೀಶ ಸೈಲ್ ಹಾಗೂ ಸದಾಶಿವ ಕೊರ್ತಿ ನಡುವೆ ಆಗ ಮಾತಿನ ಚಕಮಕಿ ನಡೆದಿತ್ತು.