ಹೊಟ್ಟೆ ಹೊಲಿದುಕೊಂಡು ಹರಕೆ ಒಪ್ಪಿಸಿದ ಮಾಜಾಳಿ ಭಕ್ತರು

markepunav
Published on

ಕಾರವಾರ: ಹಲವು ವಿಶಿಷ್ಟ ಆಚರಣೆಗಳನ್ನು ಒಳಗೊಂಡಿರುವ ಮಾಜಾಳಿಯ ಮಾರ್ಕೆಪುನವರ್ ಎಂಬ ಜಾತ್ರೆ ಗುರುವಾರ ವಿಜೃಂಭಣೆಯಿಂದ ಜರುಗಿತು. ಕಾರವಾರ, ಗೋವಾದ ಭಾಗದ ಸಾವಿರಾರು ಭಕ್ತರು ಆಗಮಿಸಿ ಹರಕೆ ಒಪ್ಪಿಸಿದರು.

ಮಾಜಾಳಿ ರಾಮನಾಥ ದೇವರ ಪರಿವಾರ ದೇವರಾದ ದಾಡನಾಥ ಹಾಗೂ ಮಾರಿಕಾಂಬೆ (ದೇವತಿ) ದೇವರ ಜಾತ್ರೆ ಇದಾಗಿದೆ. ಪ್ರತಿ ವರ್ಷ ಮಾಘ ಹುಣ್ಣಿಮೆಯಂದು ನಡೆಯುತ್ತದೆ. ದೇವಸ್ಥಾನಕ್ಕೆ ನಡೆದುಕೊಳ್ಳುವ ಕುಳಾವಿ ಕುಟುಂಬದ ಯುವಕರು ಹಾಗೂ ಯುವತಿಯರು ಮತ್ತು ಮಹಿಳೆಯರು ಈ ಜಾತ್ರೆಗೆ ಆಗಮಿಸಿ ಹರಕೆ ತೀರಿಸುವುದು ವಾಡಿಕೆ.

ವಿಶಿಷ್ಟ ಹರಕೆ:

ಬೇರೆಲ್ಲ ಜಾತ್ರೆಗಿಂತ ಈ ಹರಕೆ ವಿಭಿನ್ನವಾಗಿದೆ. ದಾಡ ದೇವಸ್ಥಾನದ ಎದುರು ಯುವಕರು ತಮ್ಮ ಹೊಟ್ಟೆಗೆ ಸೂಜಿಯಿಂದ ಚುಚ್ಚಿ ದಾರ ಪೋಣಿಸಿಕೊಂಡು ಬರಿಗಾಲಲ್ಲಿ ಸುಮಾರು 2 ಕಿಮೀ ದೂರದ ದೇವತಿ ದೇವಸ್ಥಾನದವರೆಗೆ ನಡೆದು ಸಾಗಿ, ಅಲ್ಲಿ ದಾರವನ್ನು ಅರ್ಪಿಸುವ ವಿಶಿಷ್ಟ ಸಂಪ್ರದಾಯ ರೂಢಿಯಲ್ಲಿದೆ. ಕುಳಾವಿಗಳ ಹೆಣ್ಣು ಮಕ್ಕಳು ಮದುವೆಗೂ ಮುಂಚೆ ಮತ್ತು ಕುಳಾವಿ ಕುಟುಂಬಕ್ಕೆ ಮದುವೆಯಾಗಿ ಬರುವ ಸೊಸೆಯಂದಿರು ದಾಡ ದೇವಸ್ಥಾನದ ಎದುರು ದೀವಜ್ ಎಂದು ಕರೆಯುವ ಐದು ಎಸಳಿನ ಹಣತೆ ಹಚ್ಚಿಕೊಂಡು ತಲೆಯ ಮೇಲೆ ಹೊತ್ತು ಸಾಗಿ ದೇವತಿ ದೇವಸ್ಥಾನಕ್ಕೆ ಅರ್ಪಿಸುತ್ತಾರೆ.

ಯೋ ಬಂಡಿ ಯೋ:

ಸಾಮಾನ್ಯವಾಗಿ ಜಾತ್ರೆ ಎಂದರೆ ರಥ ಇರುತ್ತದೆ. ಇಲ್ಲಿ ಆಲೆಮನೆ ಗಾಣದ ಸ್ವರೂಪದ ಭಂಡಿ ಇರುತ್ತದೆ. ಅದಕ್ಕೆ ಕನಕಾಂಬರ ಹೂವನ್ನು ಸುತ್ತಿ ಅಲಂಕಾರ ಮಾಡಿ ಅದನ್ನು ಭಕ್ತರು ದಾಡ ದೇವಸ್ಥಾನದಿಂದ ದೇವತಿ ದೇವಸ್ಥಾನದವರೆಗೆ ಎಳೆಯುತ್ತಾರೆ.

ಹೊಟ್ಟೆಗೆ ಸೂಜಿ ಚುಚ್ಚಿ, ದಾರ ಪೋಣಿಸುವ ಸಮಯದಲ್ಲಿ ಅಯ್ಯಯ್ಯಯ್ಯೋ ಎಂದು ಯುವಕರ ಬಳಿ ಬೊಬ್ಬೆ ಹೊಡೆಯಲು ಹೇಳಲಾಗುತ್ತದೆ. ಗುರುವಾರ ಸಾವಿರಾರು ಭಕ್ತರು ಅಯ್ಯಯ್ಯಯ್ಯೋ ಯೋ ಬಂಡಿ ಯೋ(ಕೊಂಕಣಿಯಲ್ಲಿ ಬಾ ಬಂಡಿ ಬಾ ಎಂದರ್ಥ) ಎಂದು ಕೂಗುತ್ತ ಭಂಡಿ ಎಳೆತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net