ಮಳೆ ಇಲ್ಲದೆ ಒಣಗಿದ ಮೆಕ್ಕೆ ಜೋಳ

01 Hg Photo
Published on

ಹಗರೆ: ವಾಡಿಕೆಯಂತೆ ಮಳೆ ಬಾರದೆ ಮುಸುಕಿನ ಜೋಳದ ಬೆಳೆ ಒಣಗುತ್ತಿದ್ದು, ರೈತರು ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಬೇಲೂರು ತಾಲೂಕಿನ ಮಾದೀಹಳ್ಳಿ ಹೋಬಳಿಯಾದ್ಯಂತ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಮುಸುಕಿನ ಜೋಳ(ಮೆಕ್ಕೆಜೋಳ) ವನ್ನು ಯಥೇಚ್ಛವಾಗಿ ಬೆಳೆಯಲಾಗುತ್ತದೆ. ಬೇರೆ ಯಾವುದೇ ಬೆಳೆ ಮೇಲೂ ಇಲ್ಲದಷ್ಟು ನಂಬಿಕೆ ರೈತರಿಗೆ ಈ ಬೆಳೆ ಮೇಲಿದೆ. ಕಡಿಮೆ ಖರ್ಚು ಹಾಗೂ ಮಿತವಾದ ಕೆಲಸ ಎಂಬ ಉದ್ದೇಶದಿಂದ ರೈತರು ಜೋಳ ಬೆಳೆಯುತ್ತಾರೆ. ಆದರೆ ಈ ವರ್ಷ ಋತುಮಾನಕ್ಕೆ ತಕ್ಕಂತೆ ಮಳೆಯಾಗದೆ ಇರುವುದರಿಂದ ಬೆಳೆಯಲ್ಲ ಸಂಪೂರ್ಣ ಒಣಗಿದೆ. ಬೇಸಾಯಕ್ಕೆ ಮಾಡಿರುವ ಖರ್ಚು ಸಹ ಬರುತ್ತದೆ ಎಂಬ ನಂಬಿಕೆ ರೈತರಿಗೆ ಇಲ್ಲದಾಗಿದೆ.

ಹೋಬಳಿಯ ಹುಲುಗುಂಡಿ, ಆಂದಲೆ, ಬಸವಾಪುರ, ಸವಾಸಿಹಳ್ಳಿ, ದೇವಿಹಳ್ಳಿ, ಕಲ್ಯಾಣಪುರ, ಹಂದ್ರಾಳು, ಬಂಟೇನಹಳ್ಳಿ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳ 4,990 ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ. ಬಿತ್ತನೆ ಸಮಯದಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದು, ಹೊರತುಪಡಿಸಿದರೆ ನಂತರದ ದಿನಗಳಲ್ಲಿ ಮಳೆೆಯ ಪ್ರಮಾಣ ಸಂಪೂರ್ಣ ಕಡಿಮೆಯಾಯಿತು. ಪರಿಣಾಮ ಜೋಳದ ಬೆಳೆ ಬೆಳವಣಿಗೆ ಕುಂಠಿತವಾಯಿತು. ಕೆಲ ಪ್ರದೇಶಗಳಲ್ಲಿ ಜೋಳದ ತೆನೆ ಹೊರ ಬರಲೇ ಇಲ್ಲ.

ಕೃಷಿ ಇಲಾಖೆ ನೀಡಿರುವ ಅಂಕಿ-ಅಂಶಗಳ ಪ್ರಕಾರ ಬೇಲೂರು ತಾಲೂಕಿನಾದ್ಯಂತ ಈ ಬಾರಿ ಶೇ.22ರಷ್ಟು ಕಡಿಮೆ ಮಳೆಯಾಗಿದೆ. ಹೆಸರಿಗಷ್ಟೇ ತಾಲೂಕು ಮಲೆನಾಡಿನ ಭಾಗ ಎನಿಸಿಕೊಂಡಿದ್ದು, ಮಳೆ ಪ್ರಮಾಣ ಮಾತ್ರ ತುಂಬ ಇಳಿಕೆಯಾಗಿದೆ. ವಾಡಿಕೆಯಂತೆ ಈ ದಿನದವರೆಗೆ 699 ಮಿ.ಮೀ. ಮಳೆೆಯಾಗಬೇಕಿತ್ತು. ಆದರೆ ಕೇವಲ 544 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಸೆಪ್ಟೆಂಬರ್ ಮುಗಿಯುವುದರೊಳಗೆ 1,315 ಮಿ.ಮೀ. ನಷ್ಟು ಮಳೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net