ಮೊಳಕೆ ಬಾರದ ಮೆಕ್ಕೆಜೋಳ ಬೆಳೆ

scientist
Published on

ಕಲಘಟಗಿ: ಬಿತ್ತನೆ ಮಾಡಿದ ಮೆಕ್ಕೆಜೋಳ ಬೆಳೆ ಸಮರ್ಪಕವಾಗಿ ಮೊಳಕೆ ಒಡೆಯದ ಕಾರಣ ತಾಲೂಕಿನ ಬೇಗೂರ ಹಾಗೂ ಹುಲ್ಲಂಬಿ ಗ್ರಾಮದ ರೈತರ ಜಮೀನುಗಳಿಗೆ ಶನಿವಾರ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಭೇಟಿ ನೀಡಿ ಬೆಳೆ ಪರಿಶೀಲಿಸಿತು.

ದುಮ್ಮವಾಡ ಹಾಗೂ ತಬಕದಹೊನ್ನಳ್ಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರತಿ ಪ್ಯಾಕೆಟ್‌ಗೆ 1284 ರೂ. ನೀಡಿ ಖರೀದಿಸಿ ಹಲವು ರೈತರು ಬಿತ್ತನೆ ಮಾಡಿದ್ದರು. ಸರಿಯಾಗಿ ಮೊಳಕೆ ಬಾರದೇ ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. ಜುಲೈ 1 ರಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಬೇಗೂರ ಗ್ರಾಮದ ರೈತರ ಮೆಕ್ಕೆಜೋಳ ಜಮೀನು ಪರಿಶೀಲಿಸಿ ಕೃಷಿ ತಜ್ಞರ ತಂಡ ಭೇಟಿ ನೀಡಿ ವರದಿ ನೀಡಲು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ರೈತರೊಂದಿಗೆ ಜಮೀನಗಳಿಗೆ ತೆರಳಿದ ವಿಜ್ಞಾನಿಗಳ ತಂಡ, ಬೆಳೆಯ ಬೆಳವಣಿಗೆ ವೀಕ್ಷಿಸಿ, ಕೆಲವು ಮೊಳಕೆ ಒಡೆದ ಜೋಳದ ಸಸಿ ಅಂತರ ಪರಿಶೀಲಿಸಿದರು. ಬೇರುಗಳ ಸ್ಥಿತಿ ಬಗ್ಗೆ ಮಾಹಿತಿ ಕಲೆ ಹಾಕಿ ಬಿತ್ತನೆ ಮಾಡಿದ ಸಮಯ, ದಿನಗಳ ಅವಧಿ, ಗೊಬ್ಬರ, ರಾಸಾಯನಿಕ ಸಿಂಪಡಣೆ ಬಗ್ಗೆ ಹಾಗೂ ಬೇಸಾಯದ ಕುರಿತು ರೈತರಿಂದ ವಿವರಣೆ ಪಡೆದರು.

ಕಷ್ಟದ ನಡುವೆಯೂ ಸಾವಿರಾರು ರೂ. ಖರ್ಚು ಮಾಡಿ ಬೀಜ, ಗೊಬ್ಬರ ಖರೀದಿಸಿದ್ದೇವೆ. ಹೀಗಾದರೆ ರೈತರು ಬದುಕುವುದು ಹೇಗೆ ಎಂದು ಅಧಿಕಾರಿಗಳ ಎದುರು ರೈತರು ಅಳಲು ತೊಡಿಕೊಂಡರು. ಅಲ್ಲದೆ, ಕಳಪೆ ಬೀಜ ವಿತರಿಸಿದ ಖಾಸಗಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಶಿವಲಿಂಗ ಮುಗಣ್ಣವರ ಇತರರು ಒತ್ತಾಯಿಸಿದರು.

ಕೃಷಿ ಇಲಾಖೆ ಆದೇಶದಂತೆ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಖಾಸಗಿ ಕಂಪನಿ ತಳಿಯ ಮೊಳಕೆ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ. ಬಿತ್ತನೆ ಬೀಜದ ಪ್ಯಾಕೆಟ್ ಪಡೆದು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ 10 ದಿನಗಳಲ್ಲಿ ವರದಿ ಸಲ್ಲಿಸುತ್ತೇವೆ ಎಂದು ಮೆಕ್ಕೆಜೋಳ ವಿಭಾಗದ ವಿಜ್ಞಾನಿ ಎಸ್.ಆರ್. ಸಲಕಿನಕೊಪ್ಪ ತಿಳಿಸಿದರು.

ವಿಜ್ಞಾನಿಗಳಾದ ಎಸ್.ಸಿ. ತಾಳಿಕೇರಿ, ಡಾ. ಪ್ರೇಮಾ ಜೆ, ಉಪ ಕೃಷಿ ನಿರ್ದೇಶಕಿ ಜಯಶ್ರೀ ಹಿರೇಮಠ, ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ, ಇಒ ಯು.ವೈ. ಕಟ್ಟಿ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net