ಗೋವಿನ ಜೋಳ ಬೆಳೆ ಹರಗಿದ ರೈತರು

MAIZE
Published on

ಶಿರಹಟ್ಟಿ: ಒಂದೆಡೆ ಸಕಾಲಕ್ಕೆ ಬಾರದ ಮುಂಗಾರು ಮಳೆ. ಮತ್ತೊಂದೆಡೆ ಹೆಸ್ಕಾಂನಿಂದ ಅಸಮರ್ಪಕ ವಿದ್ಯುತ್ ಪೂರೈಕೆ. ಇದೆಲ್ಲದರ ಪರಿಣಾಮ ಗೋವಿನಜೋಳದ ಬೆಳೆ ನೀರಿಲ್ಲದೆ ಒಣಗಿ ಹೋಗುತ್ತಿದೆ. ಸಾವಿರಾರು ರೂ. ಖರ್ಚು ಮಾಡಿ ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಕಾರಣ ರೈತರು ಗೋವಿನಜೋಳವನ್ನು ಹರಗಿ ನಾಶ ಮಾಡುತ್ತಿದ್ದಾರೆ.

ಮುಂಗಾರು ಮಳೆಯ ಅಭಾವದಿಂದ ಹೆಸರು ಬೆಳೆಯೂ ಸಕಾಲಕ್ಕೆ ಬಿತ್ತಲು ಸಾಧ್ಯವಾಗಿರಲ್ಲಿಲ. ದೇವರ ಮೇಲೆ ಭಾರಹಾಕಿ ಗೋವಿನ ಜೋಳ, ಹತ್ತಿ, ಶೇಂಗಾ ಬೆಳೆಯಲು ಬೀಜ, ಗೊಬ್ಬರ, ಆಳು, ಗಳೆ ಇತ್ಯಾದಿಗಳಿಗೆ ಪ್ರತಿ ಎಕರೆಗೆ 20 ಸಾವಿರ ರೂ.ವರೆಗೆ ಖರ್ಚು ಮಾಡಿ ಬಿತ್ತನೆ ಮಾಡಲಾಗಿತ್ತು. ಆದರೆ, ವರುಣನ ಮುನಿಸಿನಿಂದಾಗಿ ಬೆಳೆ ಕೈಗೆ ಬರುವುದು ಕಷ್ಟವಾಗಿದೆ ಹೀಗಾಗಿ ಕಡಕೋಳ, ಕುಸ್ಲಾಪೂರ ಗ್ರಾಮಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಎಕರೆ ಜೋಳವನ್ನು ಹರಗಿ ನಾಶಮಾಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ರೈತರಾದ ರೇವಣಸಿದ್ದಪ್ಪ ಕೋರಿ. ತಿಪ್ಪಣ್ಣ ಕೊಂಚಿಗೇರಿ, ತೋಟಪ್ಪ ಸೊನ್ನದ ಅವರು ಮುಂಗಾರು ಹಂಗಾಮಿನ ಹೆಸರು ಬೆಳೆ ಕೈಕೊಟ್ಟಿದ್ದರಿಂದ ಎಕರೆಗೆ 20 ಸಾವಿರ ರೂ. ಖರ್ಚು ಮಾಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಗೋವಿನ ಜೋಳ ಬೆಳೆಯಲಾಗಿತ್ತು.

ಬೆಳೆ ರಕ್ಷಣೆಗಾಗಿ ನಿತ್ಯವೂ ನಿರಂತರವಾಗಿ 7 ತಾಸು ತ್ರೀಪೇಸ್ ವಿದ್ಯುತ್ ಪೂರೈಸಿ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಕೇಳಿಕೊಂಡರೂ ಯಾವುದೇ ಪ್ರಯೋಜನವಾಗದ ಕಾರಣ ಬೆಳೆ ಹರಗಿ ನಾಶಪಡಿಸಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net