

ಎಚ್.ಡಿ.ಕೋಟೆ: ಮೈಸೂರು ಜಿಲ್ಲೆಯಲ್ಲಿ ಮೆಕ್ಕೆ ಜೋಳಕ್ಕೆ ಬಿಳಿ ಸುಳಿರೋಗ ತಗುಲಿದೆ ಎಂಬ ದೂರಿನ ಮೇರೆಗೆ ರಾಜ್ಯ ಬಿಜೆಪಿ ರೈತ ಮೋರ್ಚಾದ ವತಿಯಿಂದ ಮೈಸೂರು ಜಿಲ್ಲೆಯ ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ಕೆಲ ಮಾಹಿತಿಗಳನ್ನು ಸಂಗ್ರಹಿಸಲಾಯಿತು.
ನಂತರ ಎಚ್.ಡಿ.ಕೋಟೆ ತಾಲೂಕಿನ ಹಂಪಾಪುರ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಮೆಕ್ಕೆ ಜೋಳ ಬೆಳೆಯುವ ಕೃಷಿ ಭೂಮಿಗೆ ಬಿಜೆಪಿ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಕುಮಾರ್ ನೇತೃತ್ವದ ತಂಡ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ವೇಳೆ ಮಾತನಾಡಿದ ಅವರು, ಹುಣಸೂರು ತಾಲೂಕಿನಲ್ಲಿ 12,250 ಹೆಕ್ಟೇರ್ ವ್ಯಾಪ್ತಿಯಲ್ಲಿ ಬೆಳೆಯುವ ಮೆಕ್ಕೆಜೋಳವು ಬಿಳಿಸುಳಿ ರೋಗಕ್ಕೆ ತುತ್ತಾಗಿದೆ. ತಾಲೂಕಿನಲ್ಲಿರುವ 4 ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಕಸಬಾ 3250 ಹೆಕ್ಟೇರ್, ಬಿಳಿಕೆರೆ 2270, ಗಾವಡಗೆರೆ 1280, ಹನಗೋಡು 4975 ಹೆಕ್ಟೇರ್ ಭೂಮಿಯಲ್ಲಿ ಮೆಕ್ಕೆ ಜೋಳ ರೋಗಕ್ಕೆ ತುತ್ತಾಗಿದೆ. ಎಚ್.ಡಿ.ಕೋಟೆ ತಾಲೂಕಿನಲ್ಲಿ ಒಟ್ಟು 4 ಸಾವಿರ ಹೆಕ್ಟೇರ್ ಭೂ ಪ್ರದೇಶದಲ್ಲಿ ಬೆಳೆದಿರುವ ಮೆಕ್ಕೆ ಜೋಳಕ್ಕೆ ರೋಗ ತಗುಲಿದೆ. ಹಂಪಾಪುರ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ 800 ಹೆಕ್ಟೇರ್ ಭೂಮಿಯಲ್ಲಿ ಬೆಳೆದ ಮೆಕ್ಕೆ ಜೋಳ ತೀವ್ರರೀತಿಯಲ್ಲಿ ಹಾನಿಗೊಳಗಾಗಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಕಳಪೆ ಬೀಜ ಮತ್ತು ಕ್ರಿಮಿ ನಾಶಕಗಳ ಕರಾಳ ದಂಧೆಯನ್ನು ಜನರ ಮುಂದಿಡಬೇಕಾದ ತುರ್ತು ಅವಶ್ಯಕತೆ ಇದೆ. ಅಲ್ಪಾವಧಿ ಮತ್ತು ದೀರ್ಘಾವಧಿ ಬೆಳೆಯನ್ನು ಬೆಳೆಯುತ್ತಿರುವ ರೈತರಿಗೆ ಕೃಷಿ ಇಲಾಖೆಯಿಂದ ಸೂಕ್ತ ಮಾರ್ಗದರ್ಶನವಿಲ್ಲದೆ ರಾಜ್ಯದ ಸಣ್ಣ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಹೇಳಿದರು.
ಬೀಜಗಳಿಗೆ ಸರಿಯಾದ ರೀತಿ ಚಿಕಿತ್ಸೆ ನೀಡದೆ ರೈತರಿಗೆ ವಿತರಿಸಿರುವುದು, ಖಾಸಗಿ ಕಂಪನಿಗಳಲ್ಲಿ ಉತ್ಪಾದಿಸುವ ಬೀಜಗಳ ಗುಣಮಟ್ಟವನ್ನು ಪರಿಶೀಲಿಸುವುದರಲ್ಲಿ ವಿಫಲರಾಗಿರುವುದರಿಂದ ಫಸಲು ರೋಗಕ್ಕೆ ತುತ್ತಾಗಿದೆ. ರೈತ ಸಂಪರ್ಕ ಕೇಂದ್ರಗಳು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡದಿರುವುದು ಮತ್ತು ಸರಿಯಾದ ಸಮಯದಲ್ಲಿ ಬಿಳಿಸುಳಿ ರೋಗವನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಹೇಳಿದರು.