ಮೈತಾಡಿ ಗ್ರಾಮ ಸಮಸ್ಯೆಗಳ ತವರು!

3 gkp 06
Published on

ಸಣ್ಣುವಂಡ ಕಿಶೋರ್‌ನಾಚಪ್ಪ ಗೋಣಿಕೊಪ್ಪ
ಪ್ರವಾಹ, ಕುಸಿಯುವ ಹಂತದಲ್ಲಿರುವ ಪ್ರಮುಖ ಸೇತುವೆ, ಕಾಡಾನೆ ಉಪಟಳ, ಕಿತ್ತು ಹೋಗಿರುವ ರಸ್ತೆಗಳು.. ಹೀಗೆ ಸಾಲು, ಸಾಲು ಸಮಸ್ಯೆಗಳನ್ನು ಮೈತಾಡಿ ಗ್ರಾಮ ಹೊದ್ದುಕೊಂಡಿದೆ. ಗ್ರಾಮಕ್ಕೆ ಹೆಚ್ಚು ಅನುದಾನ ನೀಡಿ, ಅಭಿವೃದ್ಧಿಗೆ ಕೈಜೋಡಿಸಿ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.


ಗ್ರಾಮಸ್ಥರಿಗೆ ಕಾವೇರಿ ನದಿ ಕೃಪೆ ತೋರಬೇಕಿದ್ದು, ನೆರೆ ಪೀಡಿತ ಗ್ರಾಮ ಎಂದು ದಾಖಲಿಸಿ ಸಮರ್ಪಕ ರೀತಿಯಲ್ಲಿ ಪರಿಹಾರ ವಿತರಣೆಯಾಗಬೇಕಿದೆ. ಮುಖ್ಯ ಸೇತುವೆ ಮೇಲ್ದರ್ಜೆಗೇರಬೇಕಿದೆ. ಗುಂಡಿ ಬಿದ್ದಿರುವ ಮೋರಿ ರಸ್ತೆ ದುರಸ್ಥಿಯಾಗಬೇಕಿದೆ. ಕಾಡಾನೆಗಳು ಗ್ರಾಮಕ್ಕೆ ಬಾರದಂತೆ ತಡೆ ಬೇಲಿ ಹಾಕಬೇಕಿದೆ. ನ್ಯಾಯ ಬೆಲೆ ಅಂಗಡಿ ಸೇವೆ, ಕ್ರೀಡಾಂಗಣ ಪೂರ್ಣಗೊಳಿಸುವುದು, ಅಸ್ಸಾಂ ಮೂಲದ ಕಾರ್ಮಿಕರ ಸರ್ವೇ, ಹೀಗೆ ಸಾಕಷ್ಟು ಪರಿಹಾರ ಕ್ರಮ ಅನುಷ್ಠಾನಕ್ಕೆ ಮುಂದಾಗಬೇಕಿದೆ.


ಪ್ರವಾಹ ಪೀಡಿತ ಗ್ರಾಮ: ವರ್ಷಂಪ್ರತಿ ಕಾವೇರಿ ನದಿ ಪ್ರವಾಹ ಸ್ಥಳಿಯರಿಗೆ ಮಾರಕವಾಗುತ್ತಿದೆ. ಭತ್ತ ಬೆಳೆ ಪ್ರವಾಹದಲ್ಲಿ ಕೊಚ್ಚಿ ಹೋಗುವ ಘಟನೆಗಳೇ ಹೆಚ್ಚಾಗಿ ನಡೆಯುತ್ತದೆ. ಭತ್ತ, ಕಾಫಿ ತೋಟ ಸೇರಿ ಸುಮಾರು ೧೦೦ ಹೆಕ್ಟೇರ್ ಪ್ರದೇಶ ಪ್ರವಾಹಕ್ಕೆ ತುತ್ತಾಗುತ್ತದೆ. ಕೊಳೆತು ಫಸಲು ಕೈಸೇರದೆ ಕೃಷಿಯೊಂದಿಗೆ ಆರ್ಥಿಕವಾಗಿಯೂ ಸಂಷಕ್ಟ ಎದುರಿಸುತ್ತಿದ್ದಾರೆ. ೧೯೬೨ ರ ನಂತರ ೨೦೨೦ ರಲ್ಲಿ ಹೆಚ್ಚು ನೀರು ನುಗ್ಗಿ ನೆರೆಯಿಂದ ಸಮಸ್ಯೆ ಎದುರಿಸಿದ್ದಾರೆ. ಆದರೆ, ಸರಿಯಾದ ಪರಿಹಾರ ದೊರೆಯುತ್ತಿಲ್ಲ. ನೆರೆ ಪೀಡಿತ ಪ್ರದೇಶ ಎಂದು ಘೋಷಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.ಹಳೆಯ ಕಾಲದ ಮೊರಿ ಕುಸಿದಿರುವುದು ಭಯ ಹೆಚ್ಚಿಸಿದೆ.


ಕುಸಿಯುವ ಭಯದಲ್ಲಿ ಕಿರ್‌ಪೊಳೆ ಸೇತುವೆ: ಸುಮಾರು ೮೦-೧೦೦ ವರ್ಷ ಇತಿಹಾಸ ಹೊಂದಿರುವ ಕಿರ್‌ಪೊಳೆ ಸೇತುವೆ ತೀರಾ ಶಿಥಿಲಾವಸ್ಥೆಯಲ್ಲಿದ್ದು, ಕುಸಿಯುವ ಆತಂಕದಲ್ಲಿದೆ. ಸೇತುವೆ-ರಸ್ತೆ ಮದ್ಯದಲ್ಲಿ ದೊಡ್ಡ ಗುಂಡಿ ಬಿದ್ದಿದ್ದು, ಸೇತುವೆ ಬಳಸಲು ಯೋಗ್ಯವಾಗಿಲ್ಲ. ಮಲ್ಲಮಟ್ಟಿ, ದೇವಣಗೇರಿ, ಹಾಲುಗುಂದ, ಅರಮೇರಿ, ಅಮ್ಮತ್ತಿ ಭಾಗಗಳಿಗೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತಿದೆ. ಆತಂಕಕ್ಕೆ ಕಾರಣವಾಗಿದೆ. ವಿರಾಜಪೇಟೆ-ಮೂರ್ನಾಡು ರಸ್ತೆ ಸಂಪರ್ಕ ಕಡಿತಗೊಂಡಾಗ ಈ ರಸ್ತೆ ಮೂಲಕ ವಾಹನಗಳು ಸಂಚರಿಸುತ್ತವೆ. ನಿತ್ಯ ೭ ಗ್ರಾಮಗಳಿಗೂ ಹೆಚ್ಚು ಗ್ರಾಮದ ಜನರು ಅವಲಂಭಿಸಿರುವ ಸೇತುವೆಗೆ ಕಾಯಕಲ್ಪ ಬೇಕು. ಒಂದು ನಾಲ್ಕು ಚಕ್ರ ವಾಹನ ಸಾಗುವಾಗ ದಿಚಕ್ರ ಮಾತ್ರ ಸಾಗಬಹುದಾಗಿದೆ. ಇದರಿಂದ ಅಪಘಾತ ನಡೆಯುವ ಮುನ್ನ ಯೋಜನೆ ರೂಪಿಸಿ ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ. ಈಗಲೂ ಇದೇ ಸೇತುವೆಯನ್ನು ಗ್ರಾಮಸ್ಥರು ಬಳಸುತ್ತಿದ್ದಾರೆ.


ಅಭಿವೃದ್ದಿಯಾಗಬೇಕಿದೆ ಸಂಪರ್ಕ ರಸ್ತೆಗಳು: ಮಳೆ ಪ್ರಮಾಣ ಹೆಚ್ಚಿರುವುದರಿಂದ ಗ್ರಾಮದ ಸಾಕಷ್ಟು ಸಂಪರ್ಕ ರಸ್ತೆಗಳು ಕಿತ್ತು ಹೋಗಿವೆ. ಒಂದಷ್ಟು ರಸ್ತೆಗಳು ಹೊಸದಾಗಿ ಅಭಿವೃದ್ಧಿ ಪಡಿಸಬೇಕಿದೆ. ಅಮ್ಮಂಡ, ಐಯ್ಯಮಂಡ, ಬಲ್ಲಚಂಡ, ಚಪ್ಪಂಡ, ಒಕ್ಕಲಿಗ, ಮುಂಡಚಾಡೀರ, ಐಚೇಟೀರ, ಬಾಳೆಕುಟ್ಟೀರ, ಅಣ್ಣಾಳ್‌ಪಂಡ, ತಟ್ಟಂಡ, ಪದಾರ್ಥಿ, ಬೊಳ್ಯಪಂಡ, ಬೇರೆರ ಕುಟುಂಬ ರಸ್ತೆ ಹಾಗೂ ಬೇರೇರ ಮನೆ ಸಮೀಪದ ಕಾಲನಿ ರಸ್ತೆ ಕಿತ್ತು ಹೋಗಿದೆ. ಇದಕ್ಕೆ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಪಡಿಸಬೇಕಿದೆ. ಕೃಷಿಕರು ಹೆಚ್ಚಿರುವ ಗ್ರಾಮವಾಗಿರುವುದರಿಂದ ಭತ್ತ, ಕಾಫಿ, ಕರಿಮೆಣಸು ಸಾಗಾಟಕ್ಕೆ ರಸ್ತೆ ಅಭಿವೃದ್ಧಿ ಅನಿವಾರ್ಯ.


ಆಟಕಿಲ್ಲದ ಒಳಾಂಗಣ ಕ್ರೀಡಾಂಗಣ: ಗ್ರಾಮದ ಕ್ರೀಡಾಭಿಮಾನಿಗಳನ್ನು ಪ್ರೋತ್ಸಾಹಿಸಲು ೨೦೧೭ ರಲ್ಲಿ ಪ್ರಧಾನ ಮಂತ್ರಿ ಗ್ರಾಮ ವಿಕಾಸ ಯೋಜನೆಯಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣ ಪೂರ್ಣಗೊಳ್ಳದೆ ಆಟಕ್ಕಿಲ್ಲ ಎಂಬಂತಾಗಿದೆ. ಸುಮಾರು ೧೪ ಲಕ್ಷ ರೂ. ಅನುದಾನದ ಈ ಕ್ರೀಡಾಂಗಣಕ್ಕೆ ಈಗಾಗಲೇ ೭-೮ ಲಕ್ಷ ರೂ, ಹಣ ಬಳಕೆಯಾಗಿದೆ. ಉಳಿದ ಹಣ ಏನಾಯ್ತು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕ್ರೀಡಾಂಗಣ ನೆನೆಗುದಿಗೆ ಬಿದ್ದಿದೆ. ಹಣ ದುರುಪಯೋಗ ಆಗಿರುವ ಆರೋಪ ಗ್ರಾಮಸ್ಥರಿಂದ ವ್ಯಕ್ತವಾಗಿದೆ.


ಬೆಳೆಗಳು ಆನೆ ಹೊಟ್ಟೆಗೆ: ನಿರಂತರ ಕಾಡಾನೆ ಸಮಸ್ಯೆಯಿಂದ ಬೆಳೆದು ನಿಂತ ಫಸಲು ಆನೆ ಹೊಟ್ಟೆ ಪಾಲಾಗುತ್ತಿದೆ. ಭತ್ತ ಬೆಳೆಗೆ ಸಂಕಷ್ಟ ಎದುರಾಗಿದೆ. ಬಿತ್ತನೆ ಗದ್ದೆ, ನಾಟಿ ಗದ್ದೆ ತುಳಿದು ನಾಶ ಮಾಡುತ್ತಿವೆ. ಇದರಿಂದಾಗಿ ಭತ್ತ ಬೆಳೆಗೆ ಕೃಷಿಕರಿಗೆ ನಿರಾಸಕ್ತಿ ಮೂಡಿದೆ. ಗದ್ದೆ ಪಾಳು ಬಿಡುವ ಆತಂಕವಿದೆ. ಕಾಫಿ, ಅಡಕೆ, ತೆಂಗು ಬೆಳೆಗಳು ಕೈಸೇರದ ಸ್ಥಿತಿ ಇದೆ. ಅರಣ್ಯ ಇಲಾಖೆ ಪರಿಹಾರ ನೀಡುವುದಕ್ಕಿಂತ ಶಾಶ್ವತ ಪರಿಹಾರದ ಯೋಜನೆಗೆ ಮುಂದಾಗಬೇಕು. ಆನೆಗಳು ಗ್ರಾಮಕ್ಕೆ ನುಸುಳದಂತೆ ಕ್ರಮಕೈಗೊಳ್ಳಬೇಕು. ಸಾವಿರ ರೂ. ನಷ್ಟ ಅನುಭವಿಸಿದ ರೈತರಿಗೆ ನೂರು ರೂ. ನೀಡುವುದು ರೈತರ ಹೊಟ್ಟೆಗೆ ಹೊಡೆದಂತಾಗುತ್ತಿದೆ. ಪ್ರವಾಹ, ಆನೆ ಕಾಟ ರೈತರ ಜೀವನಕ್ಕೆ ತೊಂದರೆಯಾಗುತ್ತಿದೆ.


ನ್ಯಾಯಬೆಲೆ ಅಂಗಡಿ ಬೇಕು: ೫೦೦ ಕ್ಕೂ ಹೆಚ್ಚು ಪಡಿತರದಾರರು ಮೈತಾಡಿ ಗ್ರಾಮದಲ್ಲಿದ್ದರೂ, ಇಲ್ಲಿನ ಪಡಿತರ ವಿತರಣೆ ವ್ಯವಸ್ಥೆಯನ್ನು ಕಾಕೋಟುಪರಂಬು ಗ್ರಾಮಕ್ಕೆ ಸ್ಥಳಾಂತರ ಮಾಡಿರುವುದು ತೊಂದರೆಯಾಗಿದೆ. ಸುಮಾರು ೫೦ ವರ್ಷ ಗ್ರಾಮದಲ್ಲಿಯೇ ಸೇವೆ ದೊರೆಯುತ್ತಿತ್ತು. ೨೦೧೩ ರಲ್ಲಿ ಸ್ಥಳಾಂತರ ಮಾಡಿರುವುದರಿಂದ ೬-೭ ಕಿ. ಮೀ. ದೂರ ತೆರಳಬೇಕಿದೆ. ಮಳೆಗಾಲದಲ್ಲಿ ಪ್ರವಾಹದ ನಡುವೆ ಪಡಿತರಕ್ಕೆ ಭಯದಿಂದ ತೆರಳಬೇಕಿದೆ. ಮೈತಾಡಿ ಗ್ರಾಮದಲ್ಲಿ ಮೂಲ ಸೌಕರ್ಯ ಹೊಂದಿರುವ ನ್ಯಾಯ ಬೆಲೆ ಅಂಗಡಿಗೆ ಮರು ಚಾಲನೆ ನೀಡಬೇಕಿದೆ.


ಅನಧಿಕೃತ ಅಸ್ಸಾಂ ಮೂಲದ ಕಾರ್ಮಿಕರು: ಗ್ರಾಮದಲ್ಲಿ ಕೃಷಿ ಕಾರ್ಮಿಕರಾಗಿ ಸಾಕಷ್ಟು ಅಸ್ಸಾಂ ಮೂಲದ ಕಾರ್ಮಿಕರಿದ್ದು, ಸೂಕ್ತ ದಾಖಲೆ ಹೊಂದದವರು ಹೆಚ್ಚಿದ್ದಾರೆ. ಆಧಾರ್ ಸಂಖ್ಯೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಗ್ರಾಮಸ್ಥರಿಗೆ ಅರಿವಾಗಿದೆ. ಬೇರೆಯವರ ಆಧಾರ್ ಸಂಖ್ಯೆಯನ್ನು ನೀಡಿ, ಸವಲತ್ತು ಪಡಿಯುವ ಹುನ್ನಾರ ಕೂಡ ನಡೆಯುತ್ತಿದೆ. ಕಳ್ಳತನ, ಗೋಮಾಂಸ ಮಾರಾಟ, ಗೋ ಸಾಗಾಟಕ್ಕೂ ಕೂಡ ಇವರ ಬಳಕೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ದಾಖಲಾತಿ ಹೊಂದಿರುವ ಕಾರ್ಮಿಕರಿಗೆ ಮಣೆ ಹಾಕಬೇಕಿದೆ.

ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅನುದಾನದ ಕೊರತೆ ಕಾಡುತ್ತಿದೆ. ನೆರೆ ಪೀಡಿತ ಗ್ರಾಮವಾಗಿ ಘೋಷಿಸಿ ವಿಶೇಷ ಅನುದಾನಕ್ಕೆ ಯೋಜನೆ ರೂಪಿಸಬೇಕಿದೆ. ಸೇತುವೆ, ಮೋರಿ, ರಸ್ತೆಗಳಿಗೆ ಕಾಯಕಲ್ಪ ಆಗಬೇಕಿದೆ. ಗ್ರಾಮಸ್ಥರು ಸರ್ಕಾರದಿಂದ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ.
-ಮುಂಡಚಾಡೀರ ಭರತ್, ಗ್ರಾ. ಪಂ. ಸದಸ್ಯ, ಮೈತಾಡಿ

೯ ವರ್ಷಗಳಿಂದ ಪಡಿತರ ವ್ಯವಸ್ಥೆ ಪಡೆಯಲು ಹರಸಾಹಸ ಪಡೆಯುತ್ತಿದ್ದೇವೆ. ಹಿರಿಯರು ಕೂಡ ದೂರದ ಕಾಕೋಟುಪರಂಬು ಗ್ರಾಮಕ್ಕೆ ತೆರಳಿ ಪಡಿತರ ಪಡೆಯುತ್ತಿರುವುದು ತೊಂದರೆಯಾಗುತ್ತಿದೆ. ನಮ್ಮ ಗ್ರಾಮದಲ್ಲಿ ಈ ಹಿಂದೆ ದೊರೆಯುತ್ತಿದ್ದಂತೆ ಪಡೆಯಲು ಅವಕಾಶ ಮಾಡಿಕೊಡಬೇಕು.
-ಕುಂಡಚ್ಚೀರ ಚಿಂಗಪ್ಪ, ಗ್ರಾಮಸ್ಥ


ಮುಖ್ಯ ಸಂಪರ್ಕ ಸೇತುವೆ ಕುಸಿಯುವ ಹಂತದಲ್ಲಿರುವುದರಿಂದ ಮೇಲ್ದರ್ಜೇರಿಸುವುದು ತೀರಾ ಅನಿವಾರ್ಯ. ಅಗಲ ಹೆಚ್ಚಿಸುವುದರಿಂದ ಭವಿಷ್ಯಕ್ಕೆ ಪ್ರಯೋಜನವಾಗುತ್ತದೆ. ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಲಿ.
-ಚಪ್ಪಂಡ ರಾಬಿನ್ ಸೋಮಯ್ಯ, ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net