ಸಭಾಭವನಕ್ಕೆ ನಿರ್ವಹಣೆ ಕಂಟಕ : ಬಿ.ಸಿ.ರೋಡಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ : ಪುರಸಭೆಗೆ ಹಸ್ತಾಂತರಿಸಲು ಪತ್ರ

10
Published on

ಸಂದೀಪ್ ಸಾಲ್ಯಾನ್ ಬಂಟ್ವಾಳ

ಸಮಾಜ ಕಲ್ಯಾಣ ಇಲಾಖೆ ಮೂಲಕ ಬಿ.ಸಿ.ರೋಡಿನಲ್ಲಿ ನಿರ್ಮಾಣಗೊಂಡ ಬಂಟ್ವಾಳ ತಾಲೂಕುಮಟ್ಟದ ಭಾರತರತ್ನ ಡಾ.ಬಿ.ಅರ್.ಅಂಬೇಡ್ಕರ್ ಸಭಾಭವನಕ್ಕೆ ನಿರ್ವಹಣೆಯ ಸಮಸ್ಯೆ ಎದುರಾಗಿದೆ.

ಸಭಾಭವನ ನಿರ್ವಹಣೆ ಉದ್ದೇಶದಿಂದ ಹಸ್ತಾಂತರ ಪಡೆದುಕೊಳ್ಳಲು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಬಂಟ್ವಾಳ ಪುರಸಭೆಗೆ ಪತ್ರ ಬರೆದಿದ್ದಾರೆ. ಬಂಟ್ವಾಳ ತಹಸೀಲ್ದಾರ್ ಅರ್ಚನಾ ಡಿ.ಭಟ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ತಾಲೂಕುಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಸಮಿತಿಯಲ್ಲಿ ಕೈಗೊಂಡ ನಿರ್ಣಯದಂತೆ ಪುರಸಭೆಗೆ ಹಸ್ತಾಂತರಿಸಲು ಪತ್ರ ಬರೆಯಲಾಗಿದೆ.

ಬಿ.ಸಿ.ರೋಡಿನ ತಾಲೂಕು ಪಂಚಾಯಿತಿ ಕಚೇರಿ ಬಳಿ 3 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನ ನಿರ್ಮಾಣಗೊಂಡಿದೆ. 2017ರಲ್ಲಿ ಶಿಲಾನ್ಯಾಸಗೊಂಡು ಕಾಮಗಾರಿ ನಿಧಾನಗತಿಯಲ್ಲಿ ಸಾಗಿ ಬಳಿಕ ಪೂರ್ಣಗೊಂಡರೂ ಉದ್ಘಾಟನೆಗೆ ಸಾಕಷ್ಟು ಸಮಯ ಪಡೆದುಕೊಂಡು ಕೊನೆಗೂ 2024ರಲ್ಲಿ ಉದ್ಘಾಟನೆಗೊಂಡಿತ್ತು. ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡರೂ ವಾಹನಗಳಿಗೆ ಪಾರ್ಕಿಂಗ್ ಸಮಸ್ಯೆ, ಸಭಾಂಗಣದೊಳಗೆ ಪ್ರತಿಧ್ವನಿ ಸಮಸ್ಯೆಯಿಂದಾಗಿ ಇಲ್ಲಿ ಕಾರ್ಯಕ್ರಮ ಆಯೋಜಿಸುವವರಿಗೂ ಸಮಸ್ಯೆಗಳು ಎದುರಾಗುತ್ತಿವೆ. ಸಭಾಂಗಣದ ವಿದ್ಯುತ್ ಬಿಲ್, ಸ್ವಚ್ಛತೆ ಮೊದಲಾದ ನಿರ್ವಹಣೆ ಸಮಸ್ಯೆಗಳು ಸಮಾಜ ಕಲ್ಯಾಣ ಇಲಾಖೆಗೆ ಎದುರಾಗಿದ್ದು, ಪುರಸಭೆಗೆ ಹಸ್ತಾಂತರ ಪಡೆದುಕೊಳ್ಳಲು ಪತ್ರ ಬರೆದು ಮನವಿ ಮಾಡಿಕೊಂಡಿದೆ.

ಪುರಸಭೆಯಲ್ಲಿ ಚರ್ಚೆ

ಅಂಬೇಡ್ಕರ್ ಭವನವನ್ನು ಬಂಟ್ವಾಳ ಪುರಸಭೆ ಹಸ್ತಾಂತರ ಪಡೆದುಕೊಳ್ಳಬೇಕು ಎನ್ನುವ ಸಮಾಜ ಕಲ್ಯಾಣ ಇಲಾಖೆಯ ಪತ್ರ ಸೋಮವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದಿದೆ. ಸದಸ್ಯರು ಈ ಬಗ್ಗೆ ಚರ್ಚೆ ನಡೆಸಿದಾಗ ಪುರಸಭೆಯಲ್ಲಿ ಇರುವ ವ್ಯವಸ್ಥೆಗಳನ್ನೇ ನಮಗೆ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ, ಇನ್ನು ಇಷ್ಟು ದೊಡ್ಡ ಸಭಾಭವನದ ನಿರ್ವಹಣೆ ನಮ್ಮಿಂದ ಸಾಧ್ಯವೇ? ಬೇಕಿದ್ದರೆ ಸ್ವಚ್ಛತೆ ಮತ್ತು ನೀರಿನ ವ್ಯವಸ್ಥೆಯನ್ನು ನಿರ್ವಹಣೆ ಮಾಡಬಹುದು ಎನ್ನುವ ಅಭಿಪ್ರಾಯ ಕೌನ್ಸಿಲ್ ಸದಸ್ಯರಿಂದ ಕೇಳಿಬಂತು. ಸಭಾಭವನದ ಲಕ್ಷಾಂತರ ರೂ. ವಿದ್ಯುತ್ ಬಿಲ್ ಈವರೆಗೆ ಪಾವತಿ ಮಾಡಿಲ್ಲ. ಮಳೆ ನೀರು ಒಳಬರುತ್ತದೆ. ಪ್ರತಿಧ್ವನಿ ಸಮಸ್ಯೆ ಇದೆ. ಪಾರ್ಕಿಂಗ್ ಸಮಸ್ಯೆ ಇದ್ದು ನಿರ್ವಹಣೆ ಕಷ್ಟ ಎನ್ನುವ ವಿಚಾರ ಚರ್ಚೆಯಾಗಿ ಸದ್ಯಕ್ಕೆ ಹಸ್ತಾಂತರ ಪಡೆದುಕೊಳ್ಳಲು ಪುರಸಭೆಯ ಕೌನ್ಸಿಲ್ ಹಿಂದೇಟು ಹಾಕಿದೆ.

ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನವನ್ನು ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಕ್ಲೀನಿಂಗ್ ಮಾಡಬೇಕು, ಅಲ್ಲಿರುವ ಸೊತ್ತುಗಳನ್ನು ನೋಡಿಕೊಳ್ಳಲು ವಾಚ್‌ಮನ್ ಬೇಕು, ಕಾರ್ಯಕ್ರಮಗಳು ನಡೆಯುವಾಗ ನೋಡಿಕೊಳ್ಳಲು ಸಿಬ್ಬಂದಿಬೇಕು, ಕರೆಂಟ್ ಬಿಲ್ ಪಾವತಿಸಬೇಕು. ಕಾರ್ಯಕ್ರಮಗಳು ನಡೆದರೆ ಮಾತ್ರ ಇಲಾಖೆಗೆ ಆದಾಯ ಬರುತ್ತದೆ. ಇಲ್ಲವಾದಲ್ಲಿ ನಿರ್ವಹಣೆ ಕಷ್ಟವಾಗುತ್ತದೆ. ಆದ್ದರಿಂದ ತಾಲೂಕುಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಪುರಸಭೆಗೆ ಹಸ್ತಾಂತರ ಪಡೆಯಲು ಪತ್ರ ಬರೆದಿದ್ದೇವೆ. ಸುನೀತಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ https://www.vijayavani.net/temple-22 https://www.vijayavani.net/eight-accused-arrested-in-suhas-shetty-murder-case-revenge-and-hatred-were-the-reasons-for-the-murder

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net