

ಬೆಂಗಳೂರು ಗ್ರಾಮಾಂತರ: ನಿರೀಕ್ಷೆಯಂತೆಯೇ ಜಿಪಂ ಕಡೇ ಅವಧಿಯ ಅಧ್ಯಕ್ಷ ವಿ.ಪ್ರಸಾದ್ ನೇತೃತ್ವದಲ್ಲಿ ನಡೆದ ಸರ್ವ ಸದಸ್ಯರ ಸಭೆ ಹಲವು ಗಂಭೀರ ವಿಷಯಗಳ ಚರ್ಚೆಗಳು ಹಾಗೂ ಕೆಲ ಮಹತ್ತರ ನಿರ್ಣಯಗಳ ಮೂಲಕ ಗಮನ ಸೆಳೆಯಿತು.
ಮುಖ್ಯವಾಗಿ ಶುದ್ಧ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಿಪಂ ನೂತನ ಅಧ್ಯಕ್ಷ ಕೈಗೊಂಡ ನಿರ್ಣಯಕ್ಕೆ ಸದಸ್ಯರ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಜಿಲ್ಲೆಯ ಶುದ್ಧ ಕುಡಿವ ನೀರಿನ ಘಟಕಗಳ ನಿರ್ವಹಣೆ ಆಯಾ ಪಂಚಾಯಿತಿ ಸುಪರ್ದಿಗೆ ಒಪ್ಪಿಸುವ ತೀರ್ಮಾನಕ್ಕೆ ಸಭೆಯಲ್ಲಿ ಅಂಗೀಕಾರ ದೊರೆಯುವುದರೊಂದಿಗೆ ಘಟಕಗಳ ನಿರ್ವಹಣೆ ಪಂಚಾಯಿತಿ ಒಡೆತನಕ್ಕೆ ಸೇರಿಸಿದ ಪ್ರಥಮ ಜಿಲ್ಲೆ ಎಂಬ ಹೆಸರು ದಾಖಲಾದಂತಾಗಿದೆ.
688 ಘಟಕದಿಂದ ಲಕ್ಷಾಂತರ ಆದಾಯ: ಜಿಲ್ಲೆಯಲ್ಲಿ 688 ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ನಿರ್ವಹಣೆ ಹೊತ್ತ ಏಜೆನ್ಸಿಗಳಿಗೆ ಸಾವಿರಾರು ರೂ. ಅನುದಾನ ನೀಡಲಾಗುತ್ತದೆ. ಆದರೆ ಘಟಕದ ದುರಸ್ತಿ ವಿಷಯದಲ್ಲಿ ಏಜೆನ್ಸಿಗಳು ಲೋಪ ಎಸಗುತ್ತಿರುವ ಬಗ್ಗೆ ಆರೋಪ ಕೇಳಿಬಂತು. ಹಲವು ಘಟಕಗಳು ದುರಸ್ತಿಯಾಗದೆ ತೊಂದರೆಯಾಗಿದೆ. ಏಜೆನ್ಸಿಗಳನ್ನು ಸಂಪರ್ಕಿಸುವ ಪ್ರಯತ್ನ ಪ್ರಯೋಜನವಿಲ್ಲದಂತಾಗಿದೆ ಎಂದು ಸದಸ್ಯರು ಗಮನಸೆಳೆದರು. ಇಂಥ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸಿ ಪಂಚಾಯಿತಿಯಿಂದಲೇ ನಿರ್ವಹಣೆ ಮಾಡುವುದು ಉತ್ತಮ. ವೆಚ್ಚವೂ ತಗ್ಗುತ್ತದೆ, ಜತೆಗೆ ಘಟಕದ ಆದಾಯದಿಂದ ಮತ್ತಷ್ಟು ಘಟಕಗಳ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ವಿ.ಪ್ರಸಾದ್ ಅಭಿಪ್ರಾಯಪಟ್ಟರು. ಜಿಪಂ ಸಿಇಒ ರವಿಕುಮಾರ್ ಒಪ್ಪಿಗೆ ಸೂಚಿಸುವ ಮೂಲಕ ಮಹತ್ತರ ನಿರ್ಣಯಕ್ಕೆ ಅಂಕಿತ ಬಿದ್ದಂತಾಯಿತು.
ಮಾಹಿತಿ ಇಲ್ಲದ ಮೇಲೆ ಯಾಕೆ ಬರ್ತಿರಿ: ಸಭೆ ಆರಂಭದಲ್ಲೇ ನೀರಿನ ವಿಭಾಗ ಇಲಾಖೆ ಅಧಿಕಾರಿಗಳ ವಿರುದ್ಧ ಅಧ್ಯಕ್ಷ ಪ್ರಸಾದ್ ಹರಿಹಾಯ್ದರು. ಜಿಲ್ಲೆಯಲ್ಲಿ ಎಷ್ಟು ಶುದ್ಧ ನೀರಿನ ಘಟಕಗಳಿವೆ, ಎಷ್ಟು ಕಾರ್ಯ ನಿರ್ವಹಿಸುತ್ತವೆ ಎಂಬ ಮಾಹಿತಿ ಕೇಳಲಾಯಿತು. ಇದಕ್ಕೆ ಸಮರ್ಪಕ ಮಾಹಿತಿ ನೀಡಲು ತಡವರಿಸಿದ ಅಧಿಕಾರಿಗಳನ್ನು ಅಧ್ಯಕ್ಷರು ತರಾಟೆ ತೆಗೆದುಕೊಂಡರು. ಸರಿಯಾದ ಮಾಹಿತಿ ಇಲ್ಲದೆ ಸಭೆಗೆ ಏಕೆ ಬರುತ್ತಿರಿ, ಪುನಃ ನಿರ್ಲಕ್ಷ್ಯ ವಹಿಸಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶುದ್ಧ ನೀರು ಅನುಮಾನ: ನೀರಿನ ಘಟಕದಲ್ಲಿ ಶುದ್ಧ ನೀರು ದೊರೆಯುವ ಖಾತರಿ ಇಲ್ಲ ಎಂದು ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಸಿದ ಸಿಇಒ ರವಿಕುಮಾರ್, ನೀರಿನ ಶುದ್ಧತೆ ಪರಿಶೀಲನೆಗೆ ಪ್ರತ್ಯೇಕ ತಂಡ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿಯೇ ಲ್ಯಾಬ್ ಇದೆ. ಪ್ರತಿ ತಿಂಗಳು ಪರೀಕ್ಷಿಸಲಾಗುತ್ತದೆ ಎಂದರು.
ಗೈಡ್‌ಲೈನ್ ಬಿಡುಗಡೆ: ಘಟಕಗಳ ನಿರ್ವಹಣೆ ಆಯಾ ಪಂಚಾಯಿತಿಗೆ ವಹಿಸಿ ಅಲ್ಲಿನ ವಾಟರ್ ಮನ್‌ಗಳ ಮೂಲಕ ಕಾರ್ಯನಿರ್ವಹಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಘಟಕಗಳ ವಿಷಯದಲ್ಲಿ ಯಾರೊಬ್ಬರೂ ಮೂಗು ತೂರಿಸದೆ ಒಬ್ಬರಿಗೆ ಜವಾಬ್ದಾರಿ ನೀಡಬೇಕು. ಗ್ರಾಮಗಳ ಕುಡಿವ ನೀರಿನ ವಿಷಯದಲ್ಲಿ ಅಡೆತಡೆಯೊಡ್ಡಿದರೆ ಅಂಥವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವುದು ಸೇರಿ ಪ್ರಮುಖ ಮಾರ್ಗಸೂಚಿ ಹೊರಡಿಸಬೇಕು ಎಂದು ಪ್ರಸಾದ್ ಹೇಳಿದರು. ಸಾಧಕ ಬಾಧಕ ಚರ್ಚಿಸಿ ಮಾರ್ಗಸೂಚಿ ತಯಾರಿಸುವ ಬಗ್ಗೆ ಸಿಇಒ ಭರವಸೆ ನೀಡಿದರು.
ನೀರಿಗೆ ನೀತಿ ಸಂಹಿತೆ ಅಡ್ಡಿನಾ?: ನೀರಿನ ಘಟಕವೊಂದಕ್ಕೆ ಪೈಪ್‌ಲೈನ್ ಅಳವಡಿಸಲು 2 ತಿಂಗಳ ಸಮಯ ತೆಗೆದುಕೊಳ್ಳಲಾಗಿದೆ ಎಂಬ ವಿಷಯ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು. ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಕೆಲಸ ತಡವಾಗಿದೆ ಎಂದು ಅಧಿಕಾರಿಗಳು ನೀಡಿದ ಸಬೂಬಿಗೆ ಕೆಂಡಾಮಂಡಲವಾದ ಅಧ್ಯಕ್ಷರು, ಕುಡಿವ ನೀರಿಗೆ ಯಾವ ನೀತಿ ಸಂಹಿತೆ ಅಡ್ಡಬರುತ್ತೆ ಯಾವ ಸುತ್ತೋಲೆಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ ಎಂಬುದನ್ನು ತಿಳಿಸಿ ಎಂದು ತರಾಟೆ ತೆಗೆದುಕೊಂಡರು.
ನಗೆಗಡಲಿನಲ್ಲಿ ತೇಲಿಸಿದ ಕಲರ್ ಜೆರಾಕ್ಸ್: ಜಿಲ್ಲೆಯಲ್ಲಿ ಕರೊನಾ ನಿರ್ವಹಣೆ ಹಾಗೂ ವೆಚ್ಚದ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆಗೆ ಮಾಹಿತಿ ಕೋರಲಾಯಿತು. ಈ ವೇಳೆ ಅಧಿಕಾರಿಗಳು ಮಾಹಿತಿ ಇದೆ ಜೆರಾಕ್ಸ್ ಪ್ರತಿ ಮಾಡಿಸಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಸಾದ್, ಕಲರ್ ಜೆರಾಕ್ಸ್ ಮಷಿನ್ ಮತ್ತಿತರ ಸವಲತ್ತು ಬೇಕು ಅಂತಾ ಕೇಳಿದ್ದೀರಿ ಸದ್ಯಕ್ಕೆ ವೈಟ್ ಆ್ಯಂಡ್ ಬ್ಲಾಕ್ ಕೊಡಿ, ಕಲರ್ ಜೆರಾಕ್ಸ್ ಮಷಿನ್ ಬಂದ ಮೇಲೆ ಕಲರ್ ಪ್ರತಿ ಕೊಡುವಿರಂತೆ ಎಂದಾಗ ಸಭೆ ನಗೆಗಡಲಿನಲ್ಲಿ ತೇಲಿತು.
ದನಕರುಗಳಿಗೆ ಸೋರಿಕೆ ನೀರು: ಘಟಕಗಳಿಂದ ಶುದ್ಧ ನೀರಿನ ಜತೆಗೆ ದೊಡ್ಡಮಟ್ಟದಲ್ಲಿ ಬೇಡವಾದ ನೀರು ಪೋಲಾಗುತ್ತಿದೆ. ಇದರ ಸದ್ಬಳಕೆಗೆ ಕ್ರಮಕೈಗೊಳ್ಳಬೇಕಿದೆ ಎಂಬ ಸಲಹೆ ಕೇಳಿಬಂತು. ಇಂಥ ನೀರನ್ನು ದನಕರುಗಳಿಗೆ ನೀರಿನ ತೊಟ್ಟಿ ನಿರ್ಮಿಸುವ ಮೂಲಕ ಪೋಲು ತಡೆಗಟ್ಟಬಹುದು, ಇದಕ್ಕೆ ನರೇಗಾ ಯೋಜನೆ ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಅಧ್ಯಕ್ಷರು ಹೇಳಿದರು.
ಸಿಇಒ ಸಿಸೇರಿಯನ್ ಪಾಠ: ಜಿಲ್ಲೆಗೆ ಹೊಸದಾಗಿ ವರ್ಗವಾಗಿರುವ ಸಿಇಒ ರವಿಕುಮಾರ್ ಪಾಲ್ಗೊಂಡ ಮೊದಲ ಸಭೆಯಲ್ಲಿ ಸಿಸೇರಿಯನ್ ಬಗ್ಗೆ ಬಹಳ ಹೊತ್ತು ಮಾತನಾಡಿದರು. ಈ ವಿಷಯದಲ್ಲೇ ಮುಳುಗಿದ್ದ ಸಿಇಒ ಕೆಲಹೊತ್ತಿನ ಬಳಿಕ ಸಾವರಿಸಿಕೊಂಡವರಂತೆ ಕಂಡರು. ಜಿಲ್ಲಾ ಆರೋಗ್ಯಾಧಿಕಾರಿ ಮಾತನಾಡಬೇಕಿದ್ದ ವಿಷಯವನ್ನು ನಾನೇ ಮಾತನಾಡಿದೆ ಎಂದು ನಗೆಯಾಡುವ ಮೂಲಕ ಮುಂದಿನ ವಿಷಯಕ್ಕೆ ಹೊರಳಿದರು. ಹೆರಿಗೆ ಆಸ್ಪತ್ರೆಗಳಲ್ಲಿ ಹಣ ವಸೂಲಿ ನಡೆಯುತ್ತಿದೆ, ನಾರ್ಮಲ್ ಹೆರಿಗೆಗೆ ಬದಲಾಗಿ ಸಿಸೇರಿಯನ್‌ಗೆ ಒತ್ತು ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದರ ಬಗ್ಗೆ ಸಿಇಒ ವಿವರಣೆ ನೀಡಲು ಮುಂದಾಗಿದ್ದರು.