

ಚಿಕ್ಕಬಳ್ಳಾಪುರ: ದೇಶದಲ್ಲಿ ಉತ್ತಮ ಸ್ವಚ್ಛತೆಯ ನಿರ್ವಹಣೆಯ ಮಹಾತ್ಮ ಗಾಂಧೀಜಿ ಕನಸನ್ನು ನನಸಾಗಿಸಬೇಕು ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ಸಲಹೆ ನೀಡಿದರು.
ಚಿಕ್ಕಬಳ್ಳಾಪುರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ನಗರಸಭೆಯು ಹಮ್ಮಿಕೊಂಡಿದ್ದ "ರಾಷ್ಟ್ರೀಯ ಸ್ವಚ್ಛತಾ ಕಾರ್ಯಕ್ರಮ"ಕ್ಕೆ ಮಾವಿನ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದಲ್ಲಿ ಉತ್ತಮ ನೈರ್ಮಲ್ಯದ ವಾತಾವರಣವಿರಬೇಕೆಂಬುದು ಮಹಾತ್ಮ ಗಾಂಧೀಜಿಯ ಮಹತ್ವದ ಕನಸಾಗಿತ್ತು. ಇದರ ಸಾಕಾರಕ್ಕೆ ಹಲವು ಸುಧಾರಣೆ ಕೆಲಸಗಳ ಅಗತ್ಯವಿದೆ. ಇದರಲ್ಲಿ ಯಶಸ್ವಿ ಹೊಂದಲು ಪ್ರತಿಯೊಬ್ಬರು ಅಗತ್ಯ ಸಹಕಾರ ನೀಡಬೇಕು. ಮನೆಗಳಲ್ಲಿನ ಮಾದರಿಯಲ್ಲಿ ರಸ್ತೆಗಳು, ಮಾರುಕಟ್ಟೆ, ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪ, ನಗರಸಭೆ ಪೌರಾಯುಕ್ತ ಮನ್ಸೂರ್ ಆಲಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಅಭಿಲಾಷ್, ಎಪಿಎಂಸಿ ಕಾರ್ಯದರ್ಶಿ ಉಮಾ ಮತ್ತಿತರರು ಇದ್ದರು.
*ಪೊರಕೆ ಹಿಡಿದು ಸ್ವಚ್ಛತೆ
ಹುತಾತ್ಮರ ದಿನಾಚರಣೆ ಅಂಗವಾಗಿ ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳು, ಅಧಿಕಾರಿಗಳು, ವರ್ತಕರು, ರೈತರು ಪೊರಕೆ ಹಿಡಿದು ಕಸವನ್ನು ವಿಲೇವಾರಿ ಮಾಡಿದರು. ಉತ್ತಮ ಸ್ವಚ್ಛತೆ ನಿರ್ವಹಣೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.