ಸಮಾಜ ಸೇವೆಗೆ ರೋಟರಿ ಸಂಸ್ಥೆ ಹೆಬ್ಬಾಗಿಲು, ನೂತನ ಅಧ್ಯಕ್ಷ ವಿ. ವಿಜಯ್ ಕುಮಾರ್ ಅಭಿಮತ, ಅಪೌಷ್ಟಿಕತೆ ನಿರ್ಮೂಲನೆಗೆ ಆದ್ಯತೆ

24-Manjunath-HSK-01
Published on

ಹೊಸಕೋಟೆ: ಸೇವಾ ಮನೋಭಾವ ಹೊಂದಿರುವವರಿಗೆ ಸೂಕ್ತ ವೇದಿಕೆ ಕಲ್ಪಿಸಿ ಬಡವರಿಗೆ, ಸಂಕಷ್ಟದಲ್ಲಿರುವವರಿಗೆ ಸಹಾಯ ನೀಡುವ ಕೆಲಸವನ್ನು ಹಲವಾರು ವರ್ಷಗಳಿಂದ ರೋಟರಿ ಸಂಸ್ಥೆ ಮಾಡಿಕೊಂಡು ಬಂದಿದೆ. ಆದ್ದರಿಂದ ಸಮಾಜ ಸೇವೆಗೆ ರೋಟರಿ ಸಂಸ್ಥೆ ಹೆಬ್ಬಾಗಿಲು ಇದ್ದಂತೆ ಎಂದು ಹೊಸಕೋಟೆ ತಾಲೂಕು ರೋಟರಿ ಸಂಸ್ಥೆ ನೂತನ ಅಧ್ಯಕ್ಷ ವಿ. ವಿಜಯ್ ಕುಮಾರ್ ತಿಳಿಸಿದರು.

ನಗರದ ಪೈ ಸಭಾಂಗಣದಲ್ಲಿ ಏರ್ಪಡಿಸಿದ್ದ ರೋಟರಿ ಸಂಸ್ಥೆಯ ಹೊಸಕೋಟೆ ತಾಲೂಕು ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ರೋಟರಿ ಸಂಸ್ಥೆಗೆ ಸೇರ್ಪಡೆಯಾಗಿದ್ದೇನೆ ಎಂದರು.

ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಸದಸ್ಯನಾಗಿ ಸೇವೆ ಮಾಡುತ್ತಿದ್ದೇನೆ. ಈಗ ಅಧ್ಯಕ್ಷನಾಗಿದ್ದು, ಮೊದಲಿಗೆ ಮಕ್ಕಳ ಆರೋಗ್ಯ ಕಾಪಾಡುವುದು ಹಾಗೂ ಅಪೌಷ್ಟಿಕತೆ ನಿರ್ಮೂಲನೆ ಹಾಗೂ ಕರೊನಾ ಸೋಂಕು ತಡೆಗೆ ಮೊದಲ ಆದ್ಯತೆ ನೀಡುತ್ತೇನೆ. ಇದಕ್ಕೆ ಸದಸ್ಯರೆಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಂಸ್ಥೆಯಿಂದ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಕೃತಕ ಕಾಲು ಜೋಡಣೆ, ಡಯಾಲಿಸಿಸ್ ವ್ಯವಸ್ಥೆ ಮಾಡಲಾಗುತ್ತಿದೆ. ಅಗತ್ಯ ಇದ್ದವರು ರೋಟರಿ ಸಂಸ್ಥೆ ನೆರವು ಪಡೆಯಬಹುದು ಎಂದರು.

ಮುಂದಿನ ದಿನಗಳಲ್ಲಿ ಹೊಸಕೋಟೆ ರೋಟರಿ ಸಂಸ್ಥೆಗೆ ಸ್ವಂತ ಕಟ್ಟಡದ ಅವಶ್ಯಕತೆ ಇದ್ದು ಇದನ್ನೂ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ನಿರ್ಗಮಿತ ಅಧ್ಯಕ್ಷ ಡಿ.ಎಸ್. ರಾಜ್‌ಕುಮಾರ್ ಮಾತನಾಡಿ, ಇಡೀ ಪ್ರಪಂಚದಲ್ಲಿ ಪೋಲಿಯೋ ನಿರ್ಮೂಲನೆಗೆ ಹೆಚ್ಚು ಒತ್ತು ನೀಡಿದ ಮೊಟ್ಟ ಮೊದಲ ಸಂಸ್ಥೆ ರೋಟರಿ. ಈಗ ಕರೊನಾ ಸಂದರ್ಭದಲ್ಲಿ ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಲು 10ನೇ ತರಗತಿಯ ಪ್ರತಿ ಇಬ್ಬರು ಮಕ್ಕಳಿಗೆ ಒಂದು ಟ್ಯಾಬ್ ಉಚಿತವಾಗಿ ನೀಡುತ್ತಿದೆ ಎಂದರು.

ರೋಟರಿ ಸಂಸ್ಥೆಯ ಕಾರ್ಯದರ್ಶಿ ರಮೇಶ್, ನಗರಸಭಾ ಸದಸ್ಯೆ ಗಾಯತ್ರಿ ವಿಜಯ್ ಕುಮಾರ್, ಮುಖಂಡರಾದ ಬಿ.ವಿ. ಬೈರೇಗೌಡ, ಡಾ. ಎಚ್.ಎಂ. ಸುಬ್ಬರಾಜ್, ತ್ಯಾಗರಾಜ್, ಲಕ್ಷ್ಮಣ್ ಗೌಡ, ಎಂ.ಸಿ. ವೆಂಕಟರಮಣಪ್ಪ, ಸುದರ್ಶನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net