

ಕೊಪ್ಪ: ಸುದ್ದಿ ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದು ಇಂದಿನ ಅಗತ್ಯವಾಗಿದ್ದು, ಪ್ರಸ್ತುತ ಸುದ್ದಿಯ ಮೂಲ ಕಂಡುಕೊಳ್ಳುವುದರಲ್ಲಿ ಎಡವುತ್ತಿದ್ದೇವೆ ಎಂದು ಪತ್ರಕರ್ತ ಡಿ.ಎಚ್.ಸುಕೇಶ್ ಹೇಳಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಪ್ರಶ್ನಿಸುವಗುಣ ಇರಬೇಕು. ಸುಳ್ಳು ಸುದ್ದಿ ಪ್ರಕಟಿಸುವುದು ಅಪರಾಧವಾಗುತ್ತದೆ. ರಾಜ್ಯಮಟ್ಟದಲ್ಲಿ ಫ್ಯಾಕ್ಟ್ ಚೆಕ್ ಮೂಲಕ ಮಾಧ್ಯಮ ಹಿಡಿತಕ್ಕೆ ಮುಂದಾಗಿದೆ. ಪತ್ರಕರ್ತರು ಸಮಾಜ ಸುಧಾರಣೆ ಜತೆಗೆ ವೈಯಕ್ತಿಕ ಜೀವನದಲ್ಲಿ ಸುಧಾರಣೆ ಕಂಡುಕೊಳ್ಳಬೇಕು ಎಂದರು.
ಪತ್ರಕರ್ತರ ಸಂಘದ ಗೌರವ ಸಲಹೆಗಾರ ಡಿ.ಎಸ್.ವಿಶ್ವನಾಥ ಶೆಟ್ಟಿ ಮಾತನಾಡಿ, ಪತ್ರಕರ್ತರು ತಮ್ಮ ತಪ್ಪುಗಳನ್ನು ಅವಲೋಕನ ಮಾಡಿಕೊಂಡು ಸರಿಪಡಿಸಿಕೊಳ್ಳಬೇಕು. ಸಮಸ್ಯೆಗಳನ್ನು ಎದೆಗಾರಿಕೆಯಿಂದ ಎದುರಿಸಿದಾಗ ಮಾತ್ರ ಗೆಲುವು ಸಾಧ್ಯವಾಗುತ್ತದೆ. ಪತ್ರಕರ್ತರು ಸಮಾಜವನ್ನು ಗಲಿಬಿಲಿಗೊಳಿಸುವ ಕೆಲಸ ಮಾಡಬಾರದು ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಎಚ್.ಮೂರ್ತಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿನೇಶ್ ಇರ್ವತ್ತೂರ್, ಉಪನ್ಯಾಸಕ ಮುರಳಿ, ಕರ್ನಾಟಕ ಒಕ್ಕೂಟ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಚಂದ್ರಶೇಖರ್ ತೇರಬಾಳ್, ಕಡೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೊಕೇಶಪ್ಪ, ರಾಜ್ಯ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಸಿ.ರಾಜೇಂದ್ರ ಇದ್ದರು.