ಮಣ್ಣಿನ ಗುಣಮಟ್ಟ ಕಾಪಾಡುವುದು ಎಲ್ಲರ ಜವಾಬ್ದಾರಿ

15 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿಶ್ವ ಮಣ್ಣು ದಿನ ನಿಮಿತ್ತ ಹುಬ್ಬಳ್ಳಿಯ ಶ್ರೀ ದುರ್ಗಾ ಡೆವಲಪರ್ಸ್​ ಮತ್ತು ಪ್ರಮೋಟರ್ಸ್ ಮುಖ್ಯ ಪ್ರಾಯೋಜಕತ್ವದಲ್ಲಿ ಹುಬ್ಬಳ್ಳಿಯ ವಸುಂಧರಾ ಪ್ರತಿಷ್ಠಾನ ಹಾಗೂ ಧಾರವಾಡದ ದಿವ್ಯ ಜ್ಞಾನಿ ಸಹದೇವಪ್ಪ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಗರದಲ್ಲಿ ರನ್​ ಫಾರ್​ ನೇಚರ್​ 3ಕೆ ಹಾಗೂ 5ಕೆ ಓಟ ಜರುಗಿತು.

ಇಲ್ಲಿನ ಕೆಸಿಡಿ ವೃತ್ತದಿಂದ ಆರಂಭವಾದ 3ಕೆ ಓಟವು ಜುಬುಲಿ ವೃತ್ತ ಮಾರ್ಗವಾಗಿ ಮರಳ ಕೆಸಿಡಿಗೆ ಆಗಮಿಸಿದರೆ, 5ಕೆ ಓಟವು ಕೆಸಿಡಿ, ಜುಬುಲಿ ವತ್ತ, ಕೆಸಿ ಪಾರ್ಕ್​ ಮಾರ್ಗವಾಗಿ ಕೆಸಿಡಿ ತಪುಪಿತು. ಓಟದಲ್ಲಿ ಪ್ಲಾಸ್ಟಿಕ್​ ಬಳಕೆಯಿಂದಾಗುವ ದುಷ್ಪರಿಣಾಮ ಹಾಗೂ ಬಟ್ಟೆ ಬ್ಯಾಗ ಬಳಕೆ ಪ್ರಯೋಜನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಇದಕ್ಕೂ ಪೂರ್ವದಲ್ಲಿ ಏರ್ಪಡಿಸಿದ್ದ ಸಾಂಕೇತಿಕ ಸಮಾರಂಭವನ್ನು ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ ಉದ್ಘಾಟಿಸಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಮಣ್ಣಿನ ಗುಣಮಟ್ಟ ಕಾಪಾಡುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ನಾವೆಲ್ಲ ಸೇರಿ ಪ್ರಕೃತಿ ಪ್ರೀತಿಸಿದರೆ, ಪ್ರಕೃತಿ ನಮ್ಮ ಮೇಲೆ ಕೃಪೆ ತೋರಲಿದೆ. ಹೀಗಾಗಿ ಫಲವತ್ತಾದ ಮಣ್ಣನ್ನು ಉಳಿಸಿಕೊಳ್ಳುವ ಮೂಲಕ ಒಳ್ಳೆ ಬೆಳೆ ಜತೆಗೆ, ಸ್ವಚ್ಛ ಪರಿಸರವನ್ನು ಮುಂದಿನ ಪೀಳಿಗೆಗೆ ನೀಡುವ ಕರ್ತವ್ಯ ನಮ್ಮದಾಗಿದೆ ಎಂದರು.

ಕಾಂಗ್ರೆಸ್​ ಮುಖಂಡ ರಜತ್​ ಉಳ್ಳಾಗಡ್ಡಿಮಠ ಮಾತನಾಡಿ, ಇಂದಿನ ದಿನಗಳಲ್ಲಿ ಮನುಷ್ಯ ತನ್ನ ಅವಶ್ಯಕತೆಗಳ ಪೂರ್ತಿಗೆ ಪ್ರಕೃತಿ ನಿರ್ಲಕ್ಷಿಸುತ್ತಿದ್ದಾನೆ. ಇಡೀ ಜಗತ್ತಿನಲ್ಲಿ ಕೃಷಿಯಿಂದಲೇ ಭಾರತ ಗುರುತಿಸಿಕೊಂಡಿದೆ. ಆದರೆ ಕೃಷಿಗೆ ಅನುಕೂಲವಾಗುವಂತೆ ಮಣ್ಣಿನ ಗುಣಮಟ್ಟ ಕಾಪಾಡುವ ಪ್ರಯತ್ನಗಳು ನಡೆದಿಲ್ಲ. ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್​ ಬಳಕೆ ಹೆಚ್ಚಾಗಿದ್ದು, ಸಹಜವಾಗಿಯೇ ಇದು ಮಣ್ಣಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತ ಸಾಗಿದೆ ಎಂದರು.

ಶ್ರೀ ದುರ್ಗಾ ಡೆವಲಪರ್ಸ್​ ಮತ್ತು ಪ್ರಮೋಟರ್ಸ್ ಎಂಡಿ ವಿರೇಶ ಉಂಡಿ ಮಾತನಾಡಿ, ದಿನದಿಂದ ದಿನಕ್ಕೆ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿರುವುದು ಕಳವಳಕಾರಿ ಸಂಗತಿ. ಹೀಗಾಗಿ ಮಣ್ಣಿನ ಫಲವತ್ತತೆ ಕಾಪಾಡಲು ಎಲ್ಲರೂ ಪ್ರಯತ್ನಿಸಬೇಕಿದೆ. ಈ ನಿಟ್ಟಿನಲ್ಲಿ ಜಾಗೃತಿ ಓಟ ಏರ್ಪಡಿಸಿರುವುದು ಶ್ಲಾಘನೀಯ ಎಂದರು.

ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ಈರೇಶ ಅಂಚಟಗೇರಿ, ಸುರೇಶ ಬೇದರೆ, ಅಂತಾರಾಷ್ಟ್ರೀಯ ಕರಾಟೆ ಪಟು ಸಾನಿಯಾ ಸುಬೇದಾರ, ಮೇಘರಾಜ ಕೆರೂರ, ಸಂಸ್ಥೆ ಪದಾಧಿಕಾರಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net