

ಬೆಂಗಳೂರು: ಬಿಬಿಎಂಪಿ ಕೈಗೊಳ್ಳುವ ಎಲ್ಲ ಕಾಮಗಾರಿಗಳಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳುವುದು ಅತ್ಯಗತ್ಯ ಎಂದು ಸಂಸ್ಥೆಯ ನೂತನ ಆಡಳಿತಾಧಿಕಾರಿ ಎಸ್.ಆರ್.ಉಮಾಶಂಕರ್ ಹೇಳಿದ್ದಾರೆ.
ಬುಧವಾರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಂಗಳೂರು ನಗರಕ್ಕೆ ಉತ್ತಮ ಮೂಲಸೌಕರ್ಯ ಬೇಕಿರುವುದು ನಿಜ. ಇದರ ಸಾಕಾರಕ್ಕಾಗಿ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಒಟ್ಟಾಗಿ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಕೂಡ ನೆರವಿನ ಹಸ್ತ ಚಾಚಬೇಕಿದೆ. ನಾಗರಿಕರು ಪದೇ ಪದೆ ಮೂಲಸೌಲಭ್ಯಕ್ಕಾಗಿ ಒತ್ತಾಯ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಾಲಿಕೆ ಇಂಜಿನಿಯರ್‌ಗಳು ಸ್ವಲ್ಪಮಟ್ಟಿಗೆ ಹೆಚ್ಚಿನ ಗುಣಮಟ್ಟ ಕಾಯ್ದುಕೊಳ್ಳುವತ್ತ ಲಕ್ಷ್ಯ ಹರಿಸಿದರೆ ಕಾಮಗಾರಿಗಳು ದೀರ್ಘ ಬಾಳಿಕೆ ಬರಲಿದೆ. ಮುಂದಿನ ದಿನಗಳಲ್ಲಿ ಈ ವಿಷಯದಲ್ಲಿ ಇನ್ನಷ್ಟು ಪರಿಣಾಮಕಾರಿಯಾದ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜಧಾನಿ ಅಭಿವೃದ್ಧಿಯಲ್ಲಿ ಬಿಬಿಎಂಪಿ ಜತೆ ಬಿಡಿಎ, ಬಿಎಂಆರ್‌ಡಿಎ, ಜಲಮಂಡಳಿ ಸಹಿತ ಇತರ ಸರ್ಕಾರಿ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇವುಗಳ ಮಧ್ಯೆ ಸಮನ್ವಯ ಸಾಧಿಸಬೇಕಿದೆ. ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ವೇಳೆ ಎಲ್ಲ ಸಂಸ್ಥೆಗಳು ಜವಾಬ್ದಾರಿಯಿಂದ ಕರ್ತವ್ಯನಿರ್ವಹಿಸಿದರೆ ಜನರಿಗೆ ಸಕಾಲದಲ್ಲಿ ಸೌಲಭ್ಯವನ್ನು ತಲುಪಿಸಬಹುದು. ಇದನ್ನು ಗಮನದಲ್ಲಿರಿಸಿ ಆಯಾ ಏಜೆನ್ಸಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಪ್ರವಾಹ ತಡೆಗೆ ಆದ್ಯತೆ:
ಪ್ರಸ್ತುತ ಮಳೆಗಾಲ ಇರುವುದರಿಂದ ನಗರದ ವಿವಿಧ ಭಾಗಗಳಲ್ಲಿ ಭಾರೀ ಉಂಟಾದಲ್ಲಿ ಸಮಸ್ಯೆಯಾಗುತ್ತಿದೆ. ನಗರದೆಲ್ಲೆಡೆಯೂ ರಾಜಕಾಲುವೆಗಳು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗದ ಕಾರಣ ದಿಢೀರ್ ಪ್ರವಾಹ ಉಂಟಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕೈಗೊಳ್ಳಲು ಇನ್ನೂ 2 ವರ್ಷ ಬೇಕಾಗಬಹುದು. ಅಲ್ಲಿಯವರೆಗೂ ತಾತ್ಕಾಲಿಕ ವ್ಯವಸ್ಥೆಯನ್ನು ಪಾಲಿಕೆ ಮಾಡಲಿದ್ದು, ಜನರಿಗೆ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ರಸ್ತೆಗುಂಡಿ ಮುಚ್ಚುವುದು ಸೇರಿ ವಿವಿಧ ಕೆಲಸವನ್ನು ಪಾಲಿಕೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಕಾರ್ಯವೈಖರಿ ಪರಿಣಾಮಕಾರಿಯಾಗಿದೆ. ಬಾಕಿ ಉಳಿದಿರುವ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಆದ್ಯತೆ ನೀಡಲಾಗುವುದು. ಆಸ್ತಿತೆರಿಗೆ ಬಾಕಿ ಉಳಿಸಿಕೊಂಡಿರುವ ಸ್ವತ್ತುದಾರರು ಜು.31ರೊಳಗೆ ಪಾವತಿಸಿದರೆ ಪಾಲಿಕೆಗೆ ಹೆಚ್ಚಿನ ಆದಾಯ ಬರಲಿದೆ. ನಾಗರಿಕರ ಕುಂದು-ಕೊರತೆ ಆಲಿಸುವ ವ್ಯವಸ್ಥೆಗೆ ಶೀಘ್ರವೇ ಸ್ಪಷ್ಟ ರೂಪ ನೀಡಲಾಗುವುದು ಎಂದು ಉಮಾಶಂಕರ್ ವಿವರಿಸಿದರು.