ಮಣ್ಣಿನ ಫಲವತ್ತತೆ ಕಾಪಾಡಿ

27 klr 3
Published on

ಕೋಲಾರ: ದೇಶದ ಬೆನ್ನೆಲುಬಾಗಿರುವ ರೈತರು ಮಣ್ಣಿನ ಫಲವತ್ತತೆ ಕಾಪಾಡುವ ಸಂಕಲ್ಪ ಮಾಡಬೇಕು. ರಸಾಯನಿಕ ಗೊಬ್ಬರ, ಕೀಟನಾಶಕಗಳ ಅತಿಯಾದ ಬಳಕೆ ನಿಲ್ಲಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್​ ನ್ಯಾಯಾಧೀಶ ಸುನೀಲ್​ ಎಸ್​.ಹೊಸಮನಿ ತಿಳಿಸಿದರು.

ಕೋಲಾರ ತಾಲುಕಿನ ಮಂಗಸಂದ್ರದ ಲಕ್ಷಿ$್ಮನಾರಾಯಣ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತೋಟಗಾರಿಕಾ ಮಹಾವಿದ್ಯಾಲಯ, ಈ ನೆಲ ಈ ಜಲ ಕಲೆ ಮತ್ತು ಸಾಂಸತಿಕ ಸಂಸ್ಥೆ ಆಶ್ರಯದಲ್ಲಿ ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗ್ರಾಮೀಣ ಕಾರ್ಯಾನುಭವ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ರೈತರ ಅಭಿವೃದ್ಧಿಗಾಗಿ ಸರ್ಕಾರ ಕೃಷಿ, ತೋಟಗಾರಿಕಾ ಇಲಾಖೆಗಳ ಮೂಲಕ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಕುರಿತು ಹಳ್ಳಿ ರೈತರಿಗೆ ಮಾಹಿತಿ ಕೊರತೆ ಇದೆ. ಇಂತಹ ಶಿಬಿರಗಳ ಮೂಲಕ ವಿದ್ಯಾರ್ಥಿಗಳು ಗ್ರಾಮೀಣ ಜನರಿಗೆ ಅರಿವು ಮೂಡಿಸಬೇಕು. ಹೆಚ್ಚಿನ ರೈತರು ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವಂತೆ ಮಾಡಬೇಕು ಎಂದರು.

ನಾವು ಪ್ರತಿ ವರ್ಷ ಜಲದಿನ, ಭೂದಿನ ಆಚರಿಸುತ್ತೇವೆ. ಇವು ಆಚರಣೆಗೆ ಸೀಮಿತವಾಗದೇ ರೈತರಿಗೆ ಸಾವಯವ ಕೃಷಿ ಕುರಿತು, ಭೂಮಿ ರಕ್ಷಣೆ ಕುರಿತು ಮಾರ್ಗದರ್ಶನ ನೀಡಬೇಕು. ಈಗಾಗಲೇ ಈ ಭಾಗದಲ್ಲಿ ಅಂತರ್ಜಲ 1,500 ಅಡಿ ತಲುಪಿದೆ ಆದ್ದರಿಂದ ಅಂತರ್ಜಲ ರಕ್ಷಣೆಯ ಕುರಿತು ಅರಿವು ನೀಡಬೇಕು ಎಂದರು.

ತೋಟಗಾರಿಕಾ ಮಹಾವಿದ್ಯಾಲಯದ ಡೀನ್​ ಆರ್​.ಕೆ.ಮೇಸ್ತ ಮಾತನಾಡಿ, ವಿದ್ಯಾರ್ಥಿಗಳು ಗ್ರಾಮೀಣ ಕಾರ್ಯಾನುಭವ ಶಿಬಿರದಲ್ಲಿ ರೈತರಿಗೆ ಕೃಷಿ, ತೋಟಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಕುರಿತು ಮಾರ್ಗದರ್ಶನ ನೀಡಿ, ಸಾವಯವ ಕೃಷಿಗೆ ಪ್ರೇರಣೆ ನೀಡಿ, ರೈತರಿಗೆ ಆರೋಗ್ಯಕರ ಕೃಷಿ ವಿಧಾನಗಳ ಕುರಿತು ತಿಳಿಸಿಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ  ಪವಾರ್​, ಕೆ.ಕೊಂಡಪ್ಪ, ಅರೆಕಾಲಿಕ ಕಾನೂನು ಸ್ವಯಂಸೇವಕ ವೆಂಕಟಾಚಲಪತಿ ಇದ್ದರು.

ತಂತ್ರಜ್ಞಾನದ ಮಾಹಿತಿ ನೀಡಿ

ಗ್ರಾಮೀಣ ಕಾರ್ಯಾನುಭವ ಶಿಬಿರಗಳಲ್ಲಿ ತೋಟಗಾರಿಕಾ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ರೈತರಿಗೆ ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ಕುರಿತು ತಿಳಿಸಿಕೊಡಬೇಕು. ಕೃಷಿ ಜತೆಗೆ ಉಪಕಸುಬುಗಳಾದ ಕುರಿ, ಕೋಳಿ, ಹಂದಿ ಸಾಕಣೆಗೂ ಮಾರ್ಗದರ್ಶನ ನೀಡಬೇಕು ಎಂದು ನ್ಯಾಯಾಧೀಶ ಸುನಿಲ ಎಸ್​.ಹೊಸಮನಿ ಹೇಳಿದರು.

ಕಾನೂನು ಅರಿವಿರಲಿ

ಪ್ರತಿಯೊಬ್ಬರು ಕನಿಷ್ಠ ಸಂವಿಧಾನ ಹಾಗೂ ಸಾಮಾನ್ಯ ಕಾನೂನು ತಿಳಿದುಕೊಂಡು, ಅದನ್ನು ಪಾಲಿಸುವ ಮೂಲಕ ಜೀವನವನ್ನು ಭದ್ರ ಪಡಿಸಿಕೊಳ್ಳಬೇಕು. ಹಳ್ಳಿಗಳಲ್ಲಿ ಯುವಕರು ಮಾದಕ ವಸ್ತುಗಳ ದಾಸರಾಗದಂತೆ ಎಚ್ಚರವಹಿಸಬೇಕು. ಬಾಲ್ಯವಿವಾಹ, ಬಾಲಕಾರ್ಮಿಕ, ಮಹಿಳೆಯರ ಮೇಲಿನ ದೌರ್ಜನ್ಯ ಇವೆಲ್ಲವೂ ಶಿಕ್ಷಾರ್ಹ ಅಪರಾಧಗಳಾಗಿದ್ದು, ಅರಿವು ಅಗತ್ಯ ಎಂದು ನ್ಯಾಯಾಧೀಶ ಸುನಿಲ ಎಸ್​.ಹೊಸಮನಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net