

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವ ಹೃದಯ ದಿನ ನಿಮಿತ್ತ ನಗರದ ಎಸ್ಡಿಎಂ ನಾರಾಯಣ ಹಾರ್ಟ್ ಸೆಂಟರ್ ವತಿಯಿಂದ ಭಾನುವಾರ ವಾಕಥಾನ್ (ಕಾಲ್ನಡಿಗೆ ಜಾಥಾ) ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಆರೋಗ್ಯಕರ ಹೃದಯ ದೀರ್ಘಕಾಲ ನಡೆಯುತ್ತದೆ ಎಂಬ ಧ್ಯೇಯ ವಾಕ್ಯದೊಂದಿಗೆ ಇಲ್ಲಿನ ಕೆಸಿಡಿ ವೃತ್ತದಿಂದ ಆರಂಭವಾದ ಜಾಥಾಕ್ಕೆ ಎಸಿಪಿ ಪ್ರಶಾಂತ ಸಿದ್ದನಗೌಡರ ಚಾಲನೆ ನೀಡಿದರು.
ಬಳಿಕ ಆರಂಭವಾದ ಜಾಥಾ ಕಾಲೇಜು ರಸ್ತೆ, ಜುಬಿಲಿ ವೃತ್ತ, ಕೋರ್ಟ್ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಹಿಂದಿ ಪ್ರಚಾರ ಸಭಾ ಮಾರ್ಗವಾಗಿ ಸೃಜನಾ ರಂಗ ಮಂದಿ ಬಳಿ ಸಮಾರೋಪಗೊಂಡಿತು. ಸುಮಾರು 3 ಕಿ.ಮೀ ವಾಕಥಾನ್ನಲ್ಲಿ ನಾರಾಯಣ ಹಾರ್ಟ್ ಸೆಂಟರ್ ಸಿಬ್ಬಂದಿ ಸೇರಿ ನೂರಾರು ಜನರು ಪಾಲ್ಗೊಂಡಿದ್ದರು.
ಹೃದಯದ ಆರೋಗ್ಯದ ಮೇಲೆ ಬೀರುವ ಪರಿಣಾಮ, ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ, ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಸೇರಿ ಇತರ ಮಾಹಿತಿಗಳನ್ನು ಒಳಗೊಂಡ ಫಲಕಗಳನ್ನು ಪ್ರದರ್ಶನ ಮಾಡಲಾಯಿತು. ಇದಲ್ಲದೆ ನಾರಾಯಣ ಹಾರ್ಟ್ ಸೆಂಟರ್ನ ಸೌಲಭ್ಯಗಳ ಬಗ್ಗೆ ಸಹ ಜನರಿಗೆ ಮಾಹಿತಿ ನೀಡಲಾಯಿತು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ, ನಾರಾಯಣ ಹಾರ್ಟ್ ಸೆಂಟರ್ನ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ ಪಟ್ಟಣಶೆಟ್ಟಿ, ಅಜೇಯ ಹುಲಮನಿ, ದುಂಡೇಶ ತಡಕೋಡ, ಸಿಬ್ಬಂದಿ, ಇತರರು ಇದ್ದರು.