

ಮೈಸೂರು: ರಾಸಾಯನಿಕ ಗೊಬ್ಬರದಿಂದ ಬೆಳೆಯುವ ಆಹಾರ ಪದಾರ್ಥಗಳನ್ನು ತಿರಸ್ಕರಿಸಿ ಸಿರಿಧಾನ್ಯ ಪದಾರ್ಥಗಳನ್ನು ಬಳಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಮಾಲ್‌ನಲ್ಲಿ ದೊರೆಯುವ ವಿದೇಶಿ ಉತ್ಪನ್ನಗಳಿಗೆ ಮಾರುಹೋಗದೆ ದೇಸಿ ಪದಾರ್ಥಗಳನ್ನು ಉಪಯೋಗಿಸಲು ಮುಂದಾಗಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.
ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಹಜ ಸಮೃದ್ಧ ಬಳಗ ಆಯೋಜಿಸಿರುವ ಸಿರಿಧಾನ್ಯ ಮೇಳವನ್ನು ಬುಧವಾರ ವೀಕ್ಷಿಸಿ ಮಾತನಾಡಿ, ಬಸವಣ್ಣ ಹೇಳಿದಂತೆ ಕಾಯಕವೇ ಕೈಲಾಸ ಎನ್ನುವಂತೆ ರೈತರು ಕಾಯಕಜೀವಿಗಳು. ಧಾರವಾಡ, ಕಲಬುರಗಿ, ವಿಜಯಪುರ, ಮೈಸೂರು, ಶಿವಮೊಗ್ಗ, ಕೋಲಾರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯುವ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದರಿಂದ ನಗರ ಪ್ರದೇಶದ ಜನರಿಗೆ ಸಿರಿಧಾನ್ಯ ದೊರೆಯುತ್ತಿದೆ ಎಂದರು.
ರಾಸಾಯನಿಕ ಗೊಬ್ಬರ ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ, ಸಾರಾಂಶ ಹಾಳಾಗುತ್ತಿದೆ. ಮಣ್ಣಿನ ಫಲವತ್ತತೆ ಹಾಳಾದರೆ ಉತ್ತಮ ಬೆಳೆ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ, ರೈತರು ರಾಸಾಯನಿಕ ಗೊಬ್ಬರದಿಂದ ಮುಕ್ತರಾಗಿ ಸಿರಿಧಾನ್ಯಗಳನ್ನು ಬೆಳೆಯಬೇಕು. ಇಂದು ದೇಶವಲ್ಲದೆ ಹೊರ ದೇಶಗಳಲ್ಲೂ ಸಿರಿಧಾನ್ಯಗಳಿಗೆ ಬೇಡಿಕೆ ಬರುತ್ತಿರುವುದರಿಂದ ಅತಿ ಹೆಚ್ಚು ರೈತರು ಬೆಳೆಯುತ್ತಿದ್ದಾರೆ. ಉತ್ತಮ ಆದಾಯವನ್ನು ಕಂಡುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿರಿಧಾನ್ಯ ಬೆಳೆಯುವ ರೈತರ ಪ್ರಮಾಣ ಹೆಚ್ಚಾಗಬೇಕಿದೆ ಎಂದು ನುಡಿದರು.
ನಗರ ಪ್ರದೇಶಗಳ ಜನರು ಮಾಲ್‌ಗಳಲ್ಲಿ ದೊರೆಯುವ ಪದಾರ್ಥಗಳಿಗೆ ಮಾರು ಹೋಗುತ್ತಿದ್ದಾರೆ. ಈ ಪದಾರ್ಥಗಳಿಂದ ಆರೋಗ್ಯ ಹದಗೆಡಲಿದೆ. ಅದರ ಬದಲಿಗೆ ನಮ್ಮ ರೈತರು ಬೆಳೆಯುವ ಸಿರಿಧಾನ್ಯ ಬಳಸಬೇಕು. ನಮ್ಮ ಮಣ್ಣಲ್ಲಿ ಬೆಳೆದು ಮಾರಾಟ ಮಾಡುವ ವಸ್ತುಗಳನ್ನು ಖರೀದಿಸಿ ಬಳಸಿದರೆ ಆರೋಗ್ಯ ಕಾಪಾಡಿಕೊಳ್ಳಬೇಕು. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ರೀತಿಯಲ್ಲಿ ವಿದೇಶಿ ಕಂಪನಿಗಳ ಆಹಾರ ಕಂಪನಿಗಳಿಂದ ದೂರವಾಗಿ ದೇಸಿ ಪದಾರ್ಥಗಳನ್ನು ಉಪಯೋಗಿಸಿದರೆ ಕೃಷಿ ಉಳಿಯಲಿದೆ ಎಂದು ಹೇಳಿದರು.