ಸಾರ್ವಜನಿಕ ಶೌಚಗೃಹಗಳಲ್ಲಿ ಶುಚಿತ್ವ ಕಾಪಾಡಿ, ನಗರಸಭೆ ಪೌರಾಯುಕ್ತ ಮಂಜುನಾಥಸ್ವಾಮಿಗೆ ಕನ್ನಡ ಸಾಂಸ್ಕೃತಿಕ ರಂಗದ ಮನವಿ

08 Nela Ph 01 Manavi
Published on

ನೆಲಮಂಗಲ: ನಗರದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಗೃಹಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ, ಸ್ವಚ್ಛತೆ ಕಾಪಾಡಬೇಕು ಎಂದು ಕನ್ನಡ ಸಾಂಸ್ಕೃತಿಕ ರಂಗದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ನಗರಸಭೆ ಪೌರಾಯುಕ್ತ ಎಲ್. ಮಂಜುನಾಥಸ್ವಾಮಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಕೋವಿಡ್-19ರಿಂದಾಗಿ ವಿಶ್ವದಾದ್ಯಂತ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಸನ್ನಿವೇಶದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ತಾಲೂಕು ಕೇಂದ್ರವಾದ ನೆಲಮಂಗಲಕ್ಕೆ ನಿತ್ಯ ಸಾವಿರಾರು ಜನರು ಬರುತ್ತಾರೆ. ಅವರ ಅವಶ್ಯಕತೆಗಳಿಗಾಗಿ ಅಗತ್ಯವಿರುವೆಡೆಗಳಲ್ಲಿ ಶೌಚಗೃಹ ನಿರ್ಮಿಸಬೇಕಿದೆ. ಆದರೆ, ಈ ಕೆಲಸವೂ ಆಗಿಲ್ಲ. ಇನ್ನೊಂದೆಡೆ ಇರುವ ಕೆಲ ಶೌಚಗೃಹಗಳಲ್ಲಿ ಸ್ವಚ್ಛತೆ ಇಲ್ಲ. ಇಂಥ ಶೌಚಗೃಹಗಳ ಬಳಕೆಯಿಂದ ಜನರು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಆದ್ದರಿಂದ, ಶೌಚಗೃಹಗಳಲ್ಲಿ ಸ್ವಚ್ಛತೆ ಕಾಪಾಡಲು ಸಮರ್ಪಕ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಆರಂಭವಾಗಿದ್ದ ಶೌಚಗೃಹಗಳಿಗೆ ಬೀಗ: ತಾಲೂಕು ಕಚೇರಿ, ಸಾರ್ವಜನಿಕ ಆಸ್ಪತ್ರೆಗೆ ಬರುವ ಜನರ ಅನುಕೂಲಕ್ಕಾಗಿ ನೇತಾಜಿ ಉದ್ಯಾನದಲ್ಲಿ ಶೌಚಗೃಹವನ್ನು ನಿರ್ಮಿಸಲಾಗಿತ್ತು. ಹಲವು ವರ್ಷಗಳ ಬಳಿಕ ಅದಕ್ಕೆ ಉದ್ಘಾಟನೆಯ ಭಾಗ್ಯವೂ ಸಿಕ್ಕಿತ್ತು. ಆದರೆ, ಐದಾರು ತಿಂಗಳಿಂದ ಅದಕ್ಕೆ ಬೀಗ ಹಾಕಲಾಗಿದೆ. ಇದರಿಂದ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಜನರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ನಗರದ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾಗುವ ಭೀತಿಗೆ ಸಿಲುಕಿದ್ದಾರೆ. ಹಾಗಾಗಿ, ಅಗತ್ಯವಿರುವ ಕಡೆಗಳಲ್ಲಿ ತಕ್ಷಣವೇ ಶೌಚಗೃಹ ನಿರ್ಮಿಸಬೇಕು. ಇಲ್ಲವಾದಲ್ಲಿ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷ ಡಿ. ಸಿದ್ದರಾಜು ಎಚ್ಚರಿಕೆ ನೀಡಿದರು.

ಕಲಾವಿದರ ಮನವಿ: ತಾಲೂಕು ಕಚೇರಿ ಬಳಿ ಇರುವ ಸಾರ್ವಜನಿಕ ರಂಗಮಂದಿರದಲ್ಲಿ ಪ್ರತಿಭಾರಂಗ ಕಲಾಸಂಸ್ಥೆ 25 ವರ್ಷಗಳ ಕಾಲ ಅಭಿನಯ ತರಬೇತಿ, ಸುಗಮಸಂಗೀತ, ನಾಟಕಗಳ ತರಬೇತಿ ಆಯೋಜಿಸುತ್ತಿತ್ತು. ಆದರೆ ದಹಿಕ ಕಸರತ್ತಿಗೆ ಬರುವ ಯುವಕರು ತಿಂಗಳಿಂದ ರಂಗಮಂದಿರಕ್ಕೆ ಬೀಗ ಹಾಕಿಕೊಂಡು ಹೋಗುತ್ತಿದ್ದಾರೆ. ಇದರಿಂದ, ತರಬೇತಿ ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ರಂಗಮಂದಿರದ ಬೀಗ ತೆಗೆಸಿಕೊಡಲು ಸಹಕರಿಸುವಂತೆ ಪ್ರತಿಭಾರಂಗ ಸಂಸ್ಥೆ ಅಧ್ಯಕ್ಷ ಬಿ. ರಾಮಯ್ಯ ಪೌರಾಯುಕ್ತರಲ್ಲಿ ಮನವಿ ಮಾಡಿಕೊಂಡರು.

ನಗರಸಭೆ ನಾಮನಿರ್ದೇಶಿತ ಸದಸ್ಯೆ ರಾಜಮ್ಮ ಪ್ರಕಾಶ್, ಬಿಜೆಪಿ ಮಹಿಳಾ ಮೋರ್ಚಾ ಗ್ರಾಮಾಂತರ ಜಿಲ್ಲಾಧ್ಯಕ್ಷೆ ಸೌಮ್ಯಾ, ಕನ್ನಡ ಸಾಂಸ್ಕೃತಿಕ ರಂಗದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಸಂಚಾಲಕ ಪಿ. ಗಿರಿಧರ್, ಸಲಹೆಗಾರ ಎಂ. ಗಿರೀಶ್, ಸದಸ್ಯ ಗೋವಿಂದರಾಜು, ನಾಗೇಶ್, ಪ್ರತಿಭಾರಂಗ ಸಂಸ್ಥೆ ಕಾರ್ಯದರ್ಶಿ ಮಂಜುನಾಥ್, ಸಂಚಾಲಕ ರಂಗೇಗೌಡ, ಕಲಾವಿದರಾದ ಎಂ. ವಿಜಯ್, ಅನುಷಾ, ಲಾವಣ್ಯಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net