

ಚಿಕ್ಕಮಗಳೂರು: ಕೋಟೆಕೆರೆ ಭಾಗದ ಸುತ್ತಲು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾಕಿಂಗ್ ಪಾಥ್ ಹಾಗೂ ವಿದ್ಯುತ್ ದ್ವೀಪ ಅಳವಡಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ ತಹಸೀಲ್ದಾರ್ ಹಾಗೂ ನಗರಸಭೆ ಆಯುಕ್ತರಿಗೆ ಸೂಚಿಸಿದರು.
ಸ್ವಚ್ಛ ಚಾರಿಟಬಲ್ ಟ್ರಸ್ಟ್ ಕರೆ ಮೇರೆಗೆ ಶುಕ್ರವಾರ ಕೋಟೆಕೆರೆಗೆ ಆಗಮಿಸಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕೆರೆ ಆವರಣದಲ್ಲಿ ಮೂಲ ಸೌಕರ್ಯ ಒದಗಿಸಲು ಕ್ರಮಕೈಗೊಳ್ಳಬೇಕು. ಕೆರೆ ಸುತ್ತಮುತ್ತಲು ಹೆಚ್ಚಿರುವ ಗಿಡ-ಗಂಟಿಗಳನ್ನು ತೆರವುಗೊಳಿಸಬೇಕು. ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ಪಾದಚಾರಿಗಳಿಗೆ ಅನುಕೂಲವಾಗುವಂತೆ ವಾಕಿಂಗ್‌ಪಾಥ್ ನಿರ್ಮಿಸಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.
ನಗರದ ಹೃದಯಭಾಗದಲ್ಲಿರುವ ಕೆರೆ ಅಭಿವೃದ್ಧಿಗೆ ಜಿಲ್ಲಾಡಳಿತ ಶ್ರಮಿಸಲಿದೆ. ಅಲ್ಲದೇ ಕೆರೆ ಸುತ್ತ ಮುತ್ತಲು ಸರ್ವೇ ನಡೆಸಿ ಒತ್ತುವರಿ ಕಂಡುಬಂದಲ್ಲಿ ತೆರವುಗೊಳಿಸಲು ಮುಂದಾಗಲಾಗುವುದು. ಕೊಳಚೆ ನೀರು ಕೆರೆಗೆ ಹರಿಯದಂತೆ ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಸುಮಂತ್, ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್, ಸ್ವಚ್ಛ ಚಾರಿಟಬಲ್ ಟ್ರಸ್ಟ್ ಕಾಯದರ್ಶಿ ಗೀತಾ ವೆಂಕಟೇಶ್, ಟ್ರಸ್ಟಿ ಎಚ್.ಪಿ.ಲಕ್ಷ್ಮೀ ಸೇರಿದಂತೆ ಮತ್ತಿತರರ ಅಧಿಕಾರಿಗಳು ಹಾಜರಿದ್ದರು.