

ಕೊಟ್ಟೂರು: ಪಟ್ಟಣದಲ್ಲಿ ಅಂದಾಜು 4 ಕೋಟಿ ರೂ. ವೆಚ್ಚದ ವಿವಿಧ ಕಾವಗಾರಿಗಳಿಗೆ ಶನಿವಾರ ಶಾಸಕ ನೇಮಿರಾಜ್ ನಾಯ್ಕ ಭೂಮಿ ಪೂಜೆ ನೆರವೇರಿಸಿದರು.
ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಹಿರೇಮಠದ ಬಲಭಾಗದಲ್ಲಿ ಭಕ್ತರಿಗೆ ನೆರಳು ನೀಡುವ ಛಾವಣೆ ನಿರ್ಮಾಣಕ್ಕೆ 83.5 ಲಕ್ಷ ರೂ. ದೇವಾಲಯದ ಬೆಳ್ಳಿ ಬಾಗಿಲು ನಿರ್ಮಾಣಕ್ಕೆ 1.11 ಕೋಟಿ ರೂ., ತೇರು ಬಯಲಿನಲ್ಲಿ ಸಂಪೂರ್ಣ ಸಿ.ಸಿ. ರಸ್ತೆ ನಿರ್ಮಾಣಕ್ಕೆ 2 ಕೋಟಿ ರೂ. ಹಾಗೂ ಇಟಗಿ ರಸ್ತೆ ಬಳಿ 8 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ಹಾಗೂ ಗೋಶಾಲೆ ನಿರ್ಮಾಣಕ್ಕೆ ಚಾಲನೆ ನೀಡಿದ ಶಾಸಕ ನೇಮಿರಾಜ್ ನಾಯ್ಕ, ಈ ಎಲ್ಲ ಕಾಮಗಾರಿಗಳೂ ಕೊಟ್ಟೂರೇಶ್ವರ ರಥೋತ್ಸವದೊಳಗೆ ಪೂರ್ಣಗೊಳ್ಳಲಿವೆ.
ಡಿ.23ರಂದು ಕಾಮಗಾರಿಗಳು ಆರಂಭವಾಗಲಿವೆ. ಆದ್ದರಿಂದ ತೇರು ಬಯಲಿನಲ್ಲಿರುವ ಅಂಗಡಿ, ಶೆಡ್ ಹಾಕಿಕೊಂಡಿರುವವರ ತೆರವಿಗೆ ನೋಟಿಸ್ ನೀಡುವಂತೆ ಪಪಂ ಮುಖ್ಯಾಧಿಕಾರಿಗೆ ಸೂಚಿಸಿದರು.
ಭಕ್ತರ ಹಿತ ಹಾಗೂ ದೇವಾಲಯದ ಕಾಮಗಾರಿಯಾಗಿರುವುದರಿಂದ ಒಂದು ಪೈಸೆಯೂ ದುರ್ಬಳಕೆಯಾಗಲು ಬಿಡುವುದಿಲ್ಲ. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುತ್ತೇನೆ. ಕಳಪೆ ಎಂದು ಗೊತ್ತಾದರೆ ತಕ್ಷಣ ನಿಲ್ಲಿಸಲು ಸಾರ್ವಜನಿಕರಿಗೆ ಅವಕಾಶವಿದೆ. ಕಳಪೆ ಆಗಿದ್ದರೆ ಮತ್ತೊಮ್ಮೆ ಕಾಮಗಾರಿ ಮಾಡಿಸಲಾಗುವುದು ಎಂದ ನೇಮಿರಾಜ್ ನಾಯ್ಕ ಅವರು, ಗೋವಿಂದ ರಾಜ್ ವರದಿ ಜಾರಿಗೊಳಿಸುವಂತೆ ಸಿಎಂಗೆ ಮನವಿ ಮಾಡಿದ್ದೇನೆ. ಈ ವರದಿ ಜಾರಿಗೆ ಬಂದರೆ ಕ್ಷೇತ್ರದ ಅಭಿವೃದ್ಧಿ ಹೆಚ್ಚಿನ ಅನುದಾನ ಬರಲಿದೆ ಎಂದರು.
ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ಶೀಘ್ರವೇ 5 ಸಾವಿರ ಲೀಟರ್ ಸಾಮಥ್ಯದ ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸುವಂತೆ ದೇವಾಲಯದ ಇಒ ಹನುಮಂತಪ್ಪಗೆ ಸೂಚಿಸಿದರು. ಪಟ್ಟಣದಲ್ಲಿ ತರಕಾರಿ ಮಾರುಕಟ್ಟೆ, ಬಸ್ ಡಿಪೋ ನಿರ್ಮಾಣಕ್ಕಾಗಿ ಜಾಗ ಹುಡುಕುವಂತೆ ತಹಸೀಲ್ದಾರ್ ಜಿ.ಕೆ.ಅಮರೇಶಗೆ ತಿಳಿಸಿದರು.
ಆಯುರ್ವೇದಿಕ್ ಆಸ್ಪತ್ರೆ ಆರಂಭಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು. ಕ್ರಿಯಾಮೂರ್ತಿಗಳಾದ ಕೊಟ್ಟೂರು ದೇವರು. ತಹಸೀಲ್ದಾರ್ ಜಿ.ಕೆ. ಅಮರೇಶ, ಧರ್ಮಕರ್ತ ಶೇಖರಯ್ಯ, ಎಂ.ಎಂ.ಜೆ.ಹರ್ಷವರ್ಧನ್, ಪ್ರಮುಖರಾದ ಬೂದಿ ಶಿವಕುಮಾರ್, ಬದ್ದಿ ರೇಖಾ ರಮೇಶ, ಫಕ್ಕೀರಪ್ಪ ಇತರರಿದ್ದರು.