

ಜಗಳೂರು : ಸುಮಾರು ವರ್ಷಗಳಿಂದ ನನೆಗುದಿಯಲ್ಲಿದ್ದ ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ಮುನ್ನೆಲೆಗೆ ಬಂದಿದ್ದು, ಶುಕ್ರವಾರ ಲೋಕೋಪಯೋಗಿ ಇಲಾಖೆ, ಪಪಂ, ಪೊಲೀಸ್ ಇಲಾಖೆ ನೇತೃತ್ವದಲ್ಲಿ ಮಾರ್ಕಿಂಗ್ ಮಾಡುವ ಕಾರ್ಯ ಆರಂಭವಾಯಿತು.
ಜಿಲ್ಲಾಧಿಕಾರಿ ಮೌಕಿಕ ಆದೇಶದ ಮೇರೆಗೆ ಶುಕ್ರವಾರ ಬೆಳಗ್ಗೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಸರ್ವೇ ಹಾಗೂ ಇಲಾಖೆ ಸಿಬ್ಬಂದಿ ಮಾರ್ಕಿಂಗ್ ಮಾಡುವ ಕಾರ್ಯ ಶುರು ಮಾಡಿದರು.
ಮೊದಲ ದಿನ ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ್, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಿಂದ ಆರಂಭವಾಗಿ ಪೊಲೀಸ್ ಠಾಣೆವರೆಗೂ 450 ಮೀಟರ್ ಮಾಕಿರ್ಂಗ್ ಮಾಡಲಾಯಿತು.
ಲೋಕೋಪಯೋಗಿ ಇಲಾಖೆ ಅಡಿ ಬರುವ ಸ್ಟೇಟ್ ಹೈವೆ ಡೆವಲ್ಮೆಂಟ್ ಪ್ರಾಜೆಕ್ಟ್‌ನಿಂದ ರಸ್ತೆ ವಿಸ್ತರಣೆಗೆ ಈಗಾಗಲೇ 20 ಕೋಟಿ ರೂ. ಬಿಡುಗಡೆಯಾಗಿದ್ದು, ರಸ್ತೆ ಅಗಲೀಕರಣ ಮುಗಿಸಲು ಅಧಿಕಾರಿಗಳು ಕಾನೂನಾತ್ಮಕವಾಗಿ ಮಾರ್ಕಿಂಗ್ ಮಾಡಲು ಮುಂದಾಗಿದ್ದಾರೆ.
ಜನರ ನೂಕುನುಗ್ಗಲು:
ರಸ್ತೆ ವಿಸ್ತರಣೆಗೆ ಮಾರ್ಕಿಂಗ್ ಮಾಡುವ ಸುದ್ದಿ ಹರಡುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಅಂಬೇಡ್ಕರ್ ವೃತ್ತ, ಹೊಸ ಬಸ್ ನಿಲ್ದಾಣ, ಪೊಲೀಸ್ ಠಾಣೆವರೆಗೂ ಜನದಟ್ಟಣೆ ಸೇರಿತ್ತು.
ದಾವಣಗೆರೆಯಿಂದ ಚಳ್ಳಕೆರೆಗೆ ಹೋಗುವ ಮಾರ್ಗದ ರಸ್ತೆಗಳು ಮೊದಲೇ ಕಿಷ್ಕಿಂದೆಯಿಂದ ಕೂಡಿದ್ದು, ಇದರಲ್ಲಿ ಜನಸಂದಣಿಯಿಂದ ಸಾರಿಗೆ ಸಂಚಾರಕ್ಕೆ ತುಂಬ ತೊಂದರೆಯುಂಟಾಯಿತು. ವಾಹನ ಮುಂದೆ ಕಳಿಸಲು ಪೊಲೀಸರು ಹರಸಾಹಸ ಪಟ್ಟರು.
ಮಾಲೀಕರಿಗೆ ಶಾಕ್:
ಏಳು ದಶಕಗಳಿಂದಲೂ ರಸ್ತೆ ವಿಸ್ತರಣೆ ಮಾಡುವ ವಿಚಾರ ಕೇಳಿ ಬಂದಿತ್ತು. ಆದರೆ, ಈ ಹಿಂದಿನ ಶಾಸಕರು ಇದರ ಬಗ್ಗೆ ದನಿ ಎತ್ತಿರಲಿಲ್ಲ. ಆದರೆ, ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ರಸ್ತೆ ವಿಸ್ತರಣೆ ಮಾಡುವ ಎಂದು ಪಣ ತೊಟ್ಟು, ಸರ್ಕಾರದಿಂದ ಹಣ ಕೂಡ ಬಿಡುಗಡೆ ಮಾಡಿಸಿದ್ದರು. ಇದರಿಂದ ಮನೆ, ಮಳಿಗೆ, ಅಂಗಡಿ ಮಾಲೀಕರಿಗೆ ಶಾಕ್ ಎದುರಾಗಿದೆ.
ವಿಜಯವಾಣಿಯಲ್ಲಿ ವರದಿ:
ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗಿರುವ ಮಲ್ಪೆ- ಮೊಳಕಾಲ್ಮೂರು, ಕೊಟ್ಟೂರು, ಬಿದರಕೆರೆ ರಸ್ತೆ ವಿಸ್ಥರಣೆ ಯಾವಾಗ? ಎನ್ನುವ ಕುರಿತು ಆ. 20ರಂದು ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.
ರಸ್ತೆ ವಿಸ್ತರಣೆ ಎಷ್ಟು?:
ಪಟ್ಟಣದಲ್ಲಿ ಹಾದು ಹೋಗಿರುವ ಮಲ್ಪೆ-ಮೋಳಕಾಲ್ಮೂರು ರಾಜ್ಯ ಹೆದ್ದಾರಿ ಕಿರಿದಾಗಿದ್ದು ಪ್ರಸ್ತುತ ರಸ್ತೆ ಮಧ್ಯದಿಂದ ಎರಡೂ ಬದಿಗೆ ತಲಾ 21 ಮೀಟರ್‌ನಂತೆ 136 ಅಡಿ ರಸ್ತೆ ವಿಸ್ತರಣೆಯಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲೋಕೋಪಯೋಗಿ ಇಲಾಖೆ ಎಇ ಪುರುಷೋತ್ತಮ ರೆಡ್ಡಿ, ನಿರಂಜನಗೌಡು, ಸತ್ಯಪ್ಪ, ಸಲೀಂ, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕಾ ಮತ್ತಿತರರಿದ್ದರು.