ಪ್ರಮುಖ ರಸ್ತೆ, ವೃತ್ತಕ್ಕೆ ಅಂಗಡಿ ಹೆಸರಿಡಿ

25manju6-Web
ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ದಿ. ಸುರೇಶ ಅಂಗಡಿ ಸ್ವಗೃಹದಲ್ಲಿ ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ರುದ್ರಣ್ಣ ಚಂದರಗಿ, ಅಧ್ಯಕ್ಷ ಶಶಿಕಾಂತ ಪಾಟೀಲ, ಈರಯ್ಯ ಖೋತ, ಕೇದಾರ ಜೋರಾಪುರ ಅವರು ಸುರೇಶ ಅಂಗಡಿ ಭಾವಚಿತ್ರಕ್ಕೆ ನಮಸ್ಕರಿಸಿ ಗೌರವ ಸಲ್ಲಿಸಿದರು.
Published on

ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಸಾಕಷ್ಟು ಕೊಡುಗೆ ನೀಡಿರುವ ದಿ.ಸುರೇಶ ಅಂಗಡಿ ಅವರ ಸ್ಮರಣಾರ್ಥ ನಗರದ ಪ್ರಮುಖ ರಸ್ತೆ, ವೃತ್ತಕ್ಕೆ ಅಥವಾ ರೈಲಿಗೆ ಅವರ ಹೆಸರು ನಾಮಕರಣ ಮಾಡಬೇಕು ಎಂದು ಬಿಜೆಪಿ ನಗರ ಘಟಕ ಉಪಾಧ್ಯಕ್ಷ ರುದ್ರಣ್ಣ ಚಂದರಗಿ ಹಾಗೂ ಅಂಗಡಿ ಅವರ ಅಭಿಮಾನಿಗಳು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ದಿ. ಸುರೇಶ ಅಂಗಡಿ ನಿವಾಸದಲ್ಲಿ ಶುಕ್ರವಾರ ಸುರೇಶ ಅಂಗಡಿ ಅವರ ಭಾವಚಿತ್ರಕ್ಕೆ ನಮಸ್ಕರಿಸಿ ಗೌರವ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ರಾಜ್ಯ ಮತ್ತು ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಸರಳ, ಸಜ್ಜನಿಕೆ ರಾಜಕಾರಣಿಯಾಗಿದ್ದ ಅಂಗಡಿ ಅವರು, ತಮ್ಮ ಕಾರ್ಯವೈಖರಿಯಿಂದಲೇ ಉನ್ನತ ಮಟ್ಟದ ಸ್ಥಾನ ಪಡೆದಿದ್ದರು. ಸಚಿವರಾದವರು ಹೇಗೆ ಕೆಲಸ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದರು. ಅವರ ಸ್ಮರಣಾರ್ಥ ಬೆಳಗಾವಿಯ ಮಹಾನಗರ ವ್ಯಾಪ್ತಿಯಲ್ಲಿರುವ ಮುಖ್ಯ ರಸ್ತೆ ಅಥವಾ ವ್ರತ್ತಕ್ಕೆ ಹಾಗೂ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಸುರೇಶ ಅಂಗಡಿ ಎಕ್ಸ್‌ಪ್ರೆಸ್ ರೈಲು ಎಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಬೆಳಗಾವಿ ಮಹಾನಗರ ಜಿಲ್ಲಾ ಅಧ್ಯಕ್ಷ ಶಶಿಕಾಂತ ಪಾಟೀಲ, ಮುಖಂಡ ರಾಜೇಂದ್ರ ಹರಕುಣಿ, ಉತ್ತರ ಮಂಡಲದ ಪ್ರಧಾನ ಕಾರ್ಯದರ್ಶಿ ಈರಯ್ಯ ಖೋತ ಹಾಗೂ ಸಾಮಾಜಿಕ ಜಾಲತಾಣದ ಜಿಲ್ಲಾ ಪ್ರಮುಖ ಕೇದಾರ ಜೋರಾಪುರ, ಶ್ರೇಯಸ್ ನಾಕಾಡಿ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net