ಇಂದಿನಿಂದ ನಳನಳಿಸಲಿವೆ ಫಲಪುಷ್ಪ!

6adarshkdga1
Published on

ಆದರ್ಶ್ ಅದ್ಕಲೇಗಾರ್ ಮಡಿಕೇರಿ
ಇಂದಿನಿಂದ(ಫೆ.7) ಫೆ.10ರವರೆಗೆ ಪ್ರವಾಸಿಗರ ನೆಚ್ಚಿನ ತಾಣ, ಮಂಜಿನ ನಗರಿಯ ಹಾಟ್‌ಸ್ಪಾಟ್ ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗುತ್ತಿದ್ದು, ಕೊಡಗಿನ ಐನ್‌ಮನೆ ಪ್ರಮುಖ ಆಕರ್ಷಣೆಯಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ತೋಟಗಾರಿಕೆ ಇಲಾಖೆ ಇವರ ಸಂಯುಕ್ತ ಅಶ್ರಯದಲ್ಲಿ ನಾಲ್ಕು ದಿನಗಳ ಕಾಲ ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ವಿವಿಧ ಬಗೆಯ ಪುಷ್ಪರಾಣಿಯರು ಪ್ರವಾಸಿಗರನ್ನು ಸೆಳೆದರೆ, ಸಂಜೆ ಸಮಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡವ ಸಾಹಿತ್ಯ ಅಕಾಡೆಮಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಳಿಸಲಿವೆ.
20 ಲಕ್ಷ ರೂ.ವೆಚ್ಚ: ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಅಂದಾಜು 20 ಲಕ್ಷ ರೂ. ವೆಚ್ಚದಲ್ಲಿ ಆಯೋಜಿಸಲಾಗುತ್ತಿದೆ. 2018 ಹಾಗೂ 2019ರಲ್ಲಿ ಸುರಿದ ಭಾರಿ ಮಳೆಯಿಂದ ರಾಜಾಸೀಟ್ ಉದ್ಯಾನಕ್ಕೆ ಹಾನಿಯಾಗಿತ್ತು. ಅಲ್ಲದೆ ಪಕ್ಕದಲ್ಲಿಯೇ ಇದ್ದ ಚಾಮುಂಡೇಶ್ವರಿ ನಗರದಲ್ಲಿ ಹಲವು ಮನೆಗಳೂ ಧರೆಗೆ ಉರುಳಿದ್ದವು. ಉದ್ಯಾನದಲ್ಲಿದ್ದ ಹೂವಿನ ರಾಶಿಯೂ ಕೊಳೆತು ಹೋಗಿತ್ತು. ಈಗ ಸಸ್ಯಕಾಶಿಯೂ ಹಸಿರಾಗಿದ್ದು, ಬೆಟ್ಟದ ಸಾಲು ಪ್ರವಾಸಿಗರ ಸೆಳೆಯುತ್ತಿವೆ. ಪ್ರವಾಸೋದ್ಯಮವೂ ಚೇತರಿಕೆಯತ್ತ ಹೆಜ್ಜೆ ಇಟ್ಟಿದೆ. ಹೀಗಾಗಿಯೇ, ಕೊಡಗು ಸಹಜ ಸ್ಥಿತಿಯತ್ತ ದಾಪುಗಾಲು ಇಡುತ್ತಿದ್ದು, ಪ್ರವಾಸೋದ್ಯಮವನ್ನೇ ನಂಬಿದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ: ಕಳೆದ ನವೆಂಬರ್, ಡಿಸೆಂಬರ್ ಹಾಗೂ ಜನವರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿಗೆ ಬಂದಿದ್ದರು. ಇದರಿಂದ ರಾಜಾಸೀಟ್‌ನ ಆದಾಯದಲ್ಲೂ ಏರಿಕೆ ಕಂಡುಬಂದಿದೆ. ರಾಜಾಸೀಟ್ ಪ್ರವೇಶ ಶುಲ್ಕದಿಂದಲೇ 70 ಲಕ್ಷ ರೂ. ಆದಾಯ ಬಂದಿದೆ ಎನ್ನುತ್ತಾರೆ ಅಧಿಕಾರಿಗಳು.


ವಿವಿಧ ಕಾರ್ಯಕ್ರಮ: ಹಗಲು ಫಲಪುಷ್ಪ ಪ್ರದರ್ಶನ ವೀಕ್ಷಣೆ ಮಾಡಿದರೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಮನತಣಿಸಲಿವೆ. ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಒಣ ಹೂ ಜೋಡಣೆ, ಬಿಡಿ ಹೂ ಜೋಡಣೆ, ಇಕೆಬಾನೆ, ರಂಗೋಲಿ ಸ್ಪರ್ಧೆಗಳನ್ನು ರಾಜಾಸೀಟಿನ ಒಳಭಾಗದಲ್ಲಿ ಆಯೋಜಿಸಲಾಗಿದೆ. ರೈತರು, ತಾವು ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ತೋಟಗಾರಿಕೆ ಇಲಾಖೆಯ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಡಲು ಅವಕಾಶ ಕಲ್ಪಿಸಲಾಗಿದೆ. ಅದರಲ್ಲಿ ಆಕರ್ಷಣೀಯ ತರಕಾರಿ ಹಾಗೂ ಹಣ್ಣುಗಳನ್ನು ಗುರ್ತಿಸಿ ಅವರಿಗೆ ಬಹುಮಾನ ನೀಡಲು ಉದ್ದೇಶಿಸಲಾಗಿದೆ. ಕೊಡಗಿನ ತೋಟಗಾರಿಕೆ, ಕೃಷಿ, ಜೇನು ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ಪ್ರವಾಸಿಗರಿಗೆ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಯಾವ್ಯಾವ ಹೂಗಳು: ತೋಟಗಾರಿಕೆ ಇಲಾಖೆಗೆ ಸೇರಿದ ನರ್ಸರಿಗಳಲ್ಲಿ ಬೆಳೆಸಿದ್ದ ಬಗೆಬಗೆಯ ಹೂವಿನ ಕುಂಡಗಳನ್ನು ತಂದು ಜೋಡಿಸಲಾಗುತ್ತಿದೆ. ಅಲ್ಲದೆ ಪಿಟೋನಿಯಾ ಆಸ್ಟರ್, ಸೇವಂತಿಗೆ, ಮೇರಿಗೋಲ್ಡ್, ಸಾಲ್ವಿಯಾ, ಪಿಂಕ್ಸ್, ವಾಟರ್‌ಲಿಲ್ಲಿ, ಫೆಸಿಲಿಯಾ, ಡೇಲಿಯಾ, ಬಿಗೋನಿಯಾ ಸೇರಿದಂತೆ ಹಲವು ತಳಿಯ ಪುಷ್ಪಗಳು ರಾಜಾಸೀಟ್‌ಗೆ ಬಂದಿವೆ. ಮಕ್ಕಳ ಮನಸ್ಸು ಗೆಲ್ಲಲು ಬಣ್ಣ ಬಣ್ಣದ ಹೂವಿನಿಂದ ಅಲಂಕೃತವಾಗುವ ವಿವಿಧ ಪ್ರಾಣಿ ಪಕ್ಷಿಗಳ ಕಲಾಕೃತಿಗಳು ಕೂಡ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯಲಿದೆ. ತರಕಾರಿ ಕೆತ್ತನೆಗಳೂ ಮನಸೂರೆಗೊಳ್ಳಲಿವೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್.


ಐನ್‌ಮನೆ ಆಕರ್ಷಣೆ: ಕೊಡಗಿನಲ್ಲಿ ಐನ್‌ಮನೆಗಳಿಗೆ ತನ್ನದೇ ಐತಿಹ್ಯವಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಐನ್‌ಮನೆ ಆಕರ್ಷಣೆಯಾಗಿದೆ. 3 ದಿನಗಳಿಂದ ಕಾರ್ಮಿಕರು ಐನ್‌ಮನೆಗೆ ಅಂತಿಮ ರೂಪ ನೀಡುತ್ತಿದ್ದಾರೆ. ಐನ್‌ಮನೆ ಕಲಾಕೃತಿಯನ್ನು ಸುಮಾರು 12ಅಡಿ ಎತ್ತರ, 20 ಅಡಿ ಉದ್ದ, 10 ಅಡಿ ಅಗಲದಲ್ಲಿ ವಿವಿಧ ಹೂವುಗಳಿಂದ ನಿರ್ಮಾಣ ಮಾಡಲಾಗಿದೆ. ಕಳೆದ ವರ್ಷ ತೀರ್ಥೋದ್ಭವದ ಕಲಾಕೃತಿ ಎಲ್ಲರ ಗಮನ ಸೆಳೆದಿತ್ತು. ಕೊಡಗಿನ ಪೂರ್ವಜರು ಬಾಳಿ ಬದುಕಿದ್ದ ಬಗೆ, ಮೂಲ ಕಲೆ, ಸಂಪ್ರದಾಯ, ಉಡುಪು, ಆಚಾರ ವಿಚಾರಗಳನ್ನು ಜನರಿಗೆ ತಿಳಿಸುವುದೇ ಐನ್‌ಮನೆಯ ಮುಖ್ಯ ಉದ್ದೇಶವಾಗಿದೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ.


ಮಮತೆಯ ಮಾರುಕಟ್ಟೆ: ಜಿಲ್ಲಾಡಳಿತ, ಗ್ರೀನ್ ಸಿಟಿ ಫೋರಂ ಹಾಗೂ ಮಡಿಕೇರಿ ನಗರಸಭೆ ಸಂಯುಕ್ತ ಆಶ್ರಯದಲ್ಲಿ ‘ಮಮತೆಯ ಮಾರುಕಟ್ಟೆ’ ಎಂಬ ವಿಶೇಷ ಕಾರ್ಯಕ್ರಮ ಪ್ರದರ್ಶನದಲ್ಲಿ ಗಮನ ಸೆಳೆಯಲಿದೆ. ಮಮತೆಯ ಮಾರುಕಟ್ಟೆ ಕಾರ್ಯಕ್ರಮ ರಾಜ್ಯದಲ್ಲೆ ಪ್ರಥಮ ಬಾರಿಗೆ ನಗರದಲ್ಲಿ ಜರುಗುತ್ತಿದೆ. ಮನೆಗಳಲ್ಲಿ ಹೆಚ್ಚುವರಿಯಾಗಿ ಅಥವಾ ಉಪಯೋಗಿಸದೆ ಇರುವ ಎಲ್ಲ ಬಟ್ಟೆಗಳು ಹಾಗೂ ಮಕ್ಕಳ ಆಟಿಕೆಗಳು, ಲೇಖನ ಸಾಮಗ್ರಿಗಳು, ಪುಸ್ತಕಗಳು, ಸುಸ್ಥಿತಿಯಲಿರುವ ಎಲೆಕ್ಟ್ರಾನಿಕ್ ವಸ್ತುಗಳು, ಮುಂತಾದವನ್ನು ಫೆ.4ರಿಂದ 10ರವರೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸಂಗ್ರಹಿಸಲಾಗುವುದು. ನಂತರ ಅಗತ್ಯವಿರುವ ಕುಟುಂಬಗಳಿಗೆ ಅವುಗಳನ್ನು ನೀಡುವುದು ಇದರ ಉದ್ದೇಶವಾಗಿದೆ ಎಂದು ನಗರಸಭೆ ಪೌರಾಯುಕ್ತ ಎಂ.ಎಲ್.ರಮೇಶ್ ಹೇಳುತ್ತಾರೆ.


ಇಂದು ಸಂಜೆ 4ಕ್ಕೆ ಉದ್ಘಾಟನೆ: ಫೆ.7ರಂದು ಸಂಜೆ 4 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಕೆ.ಜಿ.ಬೋಪಯ್ಯ, ಎಂ.ಪಿ.ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಎಸ್.ಎಲ್.ಭೋಜೇಗೌಡ, ಆಯನೂರು ಮಂಜುನಾಥ್, ಜಿಪಂ ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ, ತಾಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಕೃಷಿ, ತೋಟಗಾರಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ, ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್, ತೋಟಗಾರಿಕ ಇಲಾಖೆಯ ನಿರ್ದೇಶಕ ಬಿ.ವೆಂಕಟೇಶ್ ಪಾಲ್ಗೊಳ್ಳಲಿದ್ದಾರೆ. ಫೆ.10 ರಂದು ಸಂಜೆ 4 ಗಂಟೆಗೆ ಫಲಪುಷ್ಪ ಪ್ರದರ್ಶನದ ಸಮಾರೋಪ ಸಮಾರಂಭ ನಡೆಯಲಿದೆ.


15 ಸಿಸಿ ಕ್ಯಾಮರಾ ಅಳವಡಿಕೆ: ರಾಜಸೀಟ್ ಉದ್ಯಾನದಲ್ಲಿ ಪ್ರವಾಸಿಗರ ಹಿತದೃಷ್ಟಿಯಿಂದ ಕಾಯಂ ಆಗಿ 15 ಸಿಸಿ ಕ್ಯಾಮರಾ, ಹಾಗೂ 10 ಗ್ರಾನೈಟ್ಸ್ ಬೆಂಚ್ ಅಳವಡಿಸಲಾಗಿದೆ. ಅಲ್ಲದೆ 6 ಹೋಂಗಾರ್ಡ್, 6 ಕಾವಲುಗಾರರು ಇರಲಿದ್ದಾರೆ. ಜತೆಗೆ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ವಾಹನ ನಿಲುಗಡೆ, ಜನದಟ್ಟಣೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಚಂದ್ರಶೇಖರ್ ವಿಜಯವಾಣಿಗೆ ತಿಳಿಸಿದ್ದಾರೆ.


ಪ್ರಸಕ್ತ ವರ್ಷದ ಫಲಪುಷ್ಪ ಪ್ರದರ್ಶನದ ಆಕರ್ಷಣೆ ಐನ್‌ಮನೆಯ ಕಲಾಕೃತಿಯಾಗಿದೆ. ಜತೆಗೆ ಹೂಗಳಿಂದ ತಯಾರಿಸಲಾದ ಕಲಾಕೃತಿ ಗಮನಸೆಳೆಯಲಿದೆ. ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ಸಾರ್ವಜನಿಕರಿಗೆ 10ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದೆ.ಚಂದ್ರಶೇಖರ್ ಉಪ ನಿರ್ದೇಶಕರು, ತೋಟಗಾರಿಕಾ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net