ಮೂಡುಬಿದಿರೆ ಸಿದ್ದಾಂತ ಮಂದಿರ ಕಳವು ಆರೋಪಿ ಬಿಡುಗಡೆ

Moodbidre Jain basadi theft- Ghanashayam
Published on

ಮೂಡುಬಿದಿರೆ: 2013ನೇ ಜುಲೈ 5ರಂದು ಇಲ್ಲಿನ ಸಿದ್ದಾಂತ ಮಂದಿರದಲ್ಲಿ ನಡೆದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ವಿಗ್ರಹ ಕಳವು ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ದಾಸ್ ಆಲಿಯಾಸ್ ಘನಶ್ಯಾಮ್ ಜೈಲಿನಿಂದ ಬಿಡುಗಡೆಯಾಗಿದ್ದಾನೆ.

ಇಲ್ಲಿನ ಜೈನ ಮಠಕ್ಕೆ ಸೇರಿದ ಸಿದ್ದಾಂತ ಮಂದಿರದಲ್ಲಿ ಒಂಬತ್ತು ವರ್ಷಗಳ ಹಿಂದೆ ಪುರಾತನ ವಿಗ್ರಹಗಳು ಕಳವಾಗಿದ್ದವು. ಈ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಬಳಿಕ ಪೊಲೀಸರು ಸಂತೋಷ್ ದಾಸ್, ಆತನ ಪತ್ನಿ ದೀಪ್ತಿಮಹಿ ಪಟ್ನಾಯಕ್, ಆತನ ಮಾವ ಚಿನ್ನದ ವ್ಯಾಪಾರಿ ರಾಜಾಜಿ ಸಂಚೇತಿಯನ್ನು ಛತ್ತೀಸ್‌ಗಡ್‌ನಲ್ಲಿ ಬಂಧಿಸಿ ತನಿಖೆ ನಡೆಸಿದ್ದರು.

ದೇಶದಾದ್ಯಂತ ಹಲವಾರು ಕಳವು ಪ್ರಕರಣಗಳಲ್ಲಿ ಈ ಆರೋಪಿಗಳು ಭಾಗಿಯಾಗಿರುವುದು ಪೊಲೀಸ್ ತನಿಖೆ ವೇಳೆ ಬಯಲಾಗಿತ್ತು. ಪ್ರಕರಣದ ಮೊದಲನೇ ಆರೋಪಿ ಸಂತೋಷ್‌ದಾಸ್‌ಗೆ ಸಿದ್ದಾಂತ ಮಂದಿರ ಪ್ರಕರಣದಲ್ಲಿ ಈ ಹಿಂದೆ ಜಾಮೀನು ದೊರೆತಿದ್ದರೂ ಇತರ ಪ್ರಕರಣಗಳಲ್ಲಿ ಜಾಮೀನು ದೊರಕದ ಕಾರಣ ಈ ವರೆಗೆ ಜೈಲಿನಲ್ಲಿಯೇ ಉಳಿದಿದ್ದ.

ಅನ್ಯ ಪ್ರಕರಣಗಳಲ್ಲಿ ಜಾಮೀನು ಸಿಗದ ಕಾರಣ ಮೂಡುಬಿದಿರೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದರೂ ದಾಸ್ ವಿರುದ್ಧ ಬಾಡಿ ವಾರೆಂಟ್ ಆದೇಶ ಹೊರಡಿಸಿತ್ತು. ಸದ್ಯ ದಾಸ್ ವಿರುದ್ಧ ಇರುವ ಎಲ್ಲ ಪ್ರಕರಣಗಳಲ್ಲಿ ಜಾಮೀನು ದೊರಕಿರುವ ಕಾರಣ ಮೂಡುಬಿದಿರೆ ನ್ಯಾಯಾಲಯ ಬಾಡಿ ವಾರೆಂಟ್ ಹಿಂಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸಂತೋಷ್ ದಾಸ್ ಬಿಡುಗಡೆಗೊಂಡಿರುವುದಾಗಿ ಆರೋಪಿ ಪರ ವಕೀಲ ನಾಗೇಶ್ ಶೆಟ್ಟಿ ತಿಳಿಸಿದ್ದಾರೆ.

44 ಕಳವು ಪ್ರಕರಣಗಳ ಆರೋಪಿ: ಮೂಡುಬಿದಿರೆ ಪ್ರಕರಣದಲ್ಲಿ ಸೆರೆಸಿಕ್ಕ ಖದೀಮನ ವಿರುದ್ಧ ದೇಶಾದ್ಯಂತ 44 ಪ್ರಕರಣಗಳಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದರು. ಅಷ್ಟೇ ಅಲ್ಲದೆ ಇಲ್ಲಿಂದ ಕದ್ದ ವಿಗ್ರಹಗಳಿಗೆ ಬೆಲೆ ಕಟ್ಟಲಾಗದಷ್ಟು ಮೌಲ್ಯವಿದ್ದು, ಆರೋಪಿಗಳು ವಿದೇಶಕ್ಕೆ 2400 ಕೋಟಿ ರೂಪಾಯಿಗೆ ಮಾರಾಟ ಮಾಡಿರುವುದಾಗಿ ಪೊಲೀಸರು ತನಿಖೆ ವೇಳೆ ಮಾಹಿತಿ ಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net