ಮುತ್ತಿನ ರಾಶಿಗೆ ಮುತ್ತ ಕೊಟ್ಟಿತಲೇ ಪರಾಕ್

10GTL1
Published on

ವಿಜಯವಾಣಿ ಸುದ್ದಿಜಾಲ ಗುತ್ತಲ

ಮುತ್ತಿನ ರಾಶಿಗೆ ಮುತ್ತ ಕೊಟ್ಟಿತಲೇ ಪರಾಕ್…

ಇಲ್ಲಿನ ಹಾವನೂರ (ಚಿಕ್ಕ ಮೈಲಾರ) ಸಮೀಪದ ಜೋಗ ಅವರ ಮರಡಿಯಲ್ಲಿ ಗೊರವಪ್ಪ ಹೊನ್ನಪ್ಪ ಬಿಲ್ಲರ ಸೋಮವಾರ ಸಂಜೆ ನುಡಿದ ಮೈಲಾರಲಿಂಗೇಶ್ವರನ ಕಾರ್ಣಿಕವಿದು.

ಕಲ್ಯಾಣಿ ಚಾಲುಕ್ಯರ ಸಾಮಂತ ಅರಸ 2ನೇ ಹನುಮಂತಗೌಡ ಕಾಲದಿಂದ ಅಂದರೆ, ಸುಮಾರು 354 ವರ್ಷಗಳ ಇತಿಹಾಸದ ಹಾವನೂರ ಗ್ರಾಮದಲ್ಲಿನ ಚಿಕ್ಕಮೈಲಾರದ ಕಾರ್ಣಿಕೋತ್ಸವವು ಮೈಲಾರದ ಡೆಂಕನ ಮರಡಿಯಲ್ಲಿ ನುಡಿಯುವ ಕಾರ್ಣಿಕ ದಿನದ ಹಿಂದಿನ ದಿನ ಇಲ್ಲಿ ಕಾರ್ಣಿಕ ಹೇಳುತ್ತ ಬರಲಾಗಿದೆ.

ಸೋಮವಾರ ಸಂಜೆ ಸಾಂಪ್ರದಾಯಿಕ ಪೂಜೆಗಳ ನಂತರ ಮೈಲಾರಲಿಂಗೇಶ್ವರನನ್ನು ಮೆರವಣಿಗೆಯಲ್ಲಿ ತರಲಾಯಿತು. ನಂತರ ಚಿಕ್ಕ ಮೈಲಾರದಿಂದ ಗಂಗಮಾಳವ್ವ ಮೂರ್ತಿಗಳ ಆಗಮನವಾಯಿತು. ನಂತರ ಗೊರವಪ್ಪ 15-20 ಅಡಿ ಎತ್ತರದ ಬಿಲ್ಲನ್ನು ಏರಿ ವರ್ಷದ ಭವಿಷ್ಯ ಎಂದೇ ಅರ್ಥೈಸಲಾಗುವ ಕಾರ್ಣಿಕದ ನುಡಿಯನ್ನು ಹೇಳಲು ಬಿಲ್ಲನೇರಿ ಸದ್ದಲೇ ಎನ್ನುತ್ತಲೇ ಆಗಮಿಸಿದ್ದ ಸಾವಿರಾರು ಭಕ್ತರು ಮೌನವಾದರು. ನಂತರ ಒಂದೇ ವಾಕ್ಯದ ವರ್ಷದ ಭವಿಷ್ಯ ಹೇಳಿ ಮೇಲಿಂದ ಗೊರವಪ್ಪ ಉತ್ತರ ದಿಕ್ಕಿನ ಕಡೆ ತಲೆ ಮಾಡಿ ಬಿದ್ದಿದ್ದರಿಂದ ಆ ಭಾಗದಲ್ಲಿ ಉತ್ತಮ ಮಳೆ ಬೆಳೆ ಆಗಲಿದೆ ಎಂದು ಭಕ್ತರು ಅರ್ಥೈಸಿಕೊಂಡರು.

ಈ ಬಾರಿಯ ಭವಿಷ್ಯವು ಅನೇಕ ರೀತಿಯಲ್ಲಿ ಅರ್ಥೈಸಲಾಗಿದ್ದು, ಪ್ರಸ್ತಕ ವರ್ಷ ರೈತರಿಗೆ ಈ ಕಾರ್ಣಿಕ ಹೆಚ್ಚು ಮಹತ್ವ ನೀಡಿದೆ. ಈ ವರ್ಷದ ಮುಂಗಾರು ಹಾಗೂ ಹಿಂಗಾರು ಮಳೆ ಉತ್ತಮವಾಗುತ್ತದೆ. ಇದರೊಂದಿಗೆ ರೈತರಿಗೆ ಉತ್ತಮ ಫಸಲು ಬರುವುದಲ್ಲದೆ ಉತ್ತಮ ಬೆಲೆಯೂ ಸಿಕ್ಕು ಸಂತೋಷವಾಗಿರುತ್ತಾನೆ ಎಂದು ಅನೇಕರು ವಿಶ್ಲೇಷಿಸಿದರು. ಕೆಲವರು, ರೈತರಿಗೆ ಕಷ್ಟ ಅಥವಾ ಸುಖ ಎರಡರಲ್ಲಿ ಒಂದು ಎಂಬ ಅರ್ಥ ನೀಡಿದರು.

ಇನ್ನು ರಾಜಕೀಯ ವಲಯಕ್ಕೆ ಅರ್ಥೈಸಿ ಮಾತನಾಡಿದ ಅನೇಕರು, ರಾಜಕೀಯ ಪಕ್ಷಗಳಿಗೆ ಹೈಕಮಾಂಡ್ ನಿರ್ಧಾರ ಇರುಸು ಮುರುಸು ತರುವುದು. ಪ್ರಾದೇಶಿಕ ಪ್ರಬಲ ನಾಯಕರಿಗೆ ಹೈಕಮಾಂಡ್​ಗಳ ನಿರ್ಧಾರ ಸಿಹಿಗಿಂತ ಕಹಿಯಾಗುವುದರಲ್ಲಿ ಎರಡು ಮಾತಿಲ್ಲ. ಇನ್ನೂ ಕೆಲವರು ಸ್ಥಳೀಯವಾಗಿ ಪ್ರಬಲ ನೇತಾರನೊಬ್ಬನ ಸಾಮರ್ಥ್ಯಕ್ಕೆ ಮೆಚುಗೆ ವ್ಯಕ್ತಪಡಿಸಿ, ಅವರನ್ನು ಉನ್ನತ ಸ್ಥಾನಕ್ಕೆ ನಿಯೋಜಿಸಬಹುದು ಎಂದು ಅರ್ಥೈಸಿದರು.

ಕಾರ್ಣಿಕವನ್ನು ವೀಕ್ಷಿಸಲು ಹಾವನೂರ ಸೇರಿ ಸುತ್ತಲಿನ ಗ್ರಾಮಗಳ ಸಾವಿರಾರು ಜನರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net