ಮೃತಿಕಾ ಬೃಂದಾವನದಲ್ಲಿ ರಾಯರ ಆರಾಧನೆ

dj hsd rayaru
Published on

ಹೊಸದುರ್ಗ: ಪಟ್ಟಣದ ಮೃತಿಕಾ ಬೃಂದಾವನವಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಗುರುವಾರ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ವರ್ಷದ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಹೆಚ್ಚಿನ ಸಂಖ್ಯೆಯ ಭಕ್ತರು ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ಮೂರು ದಿನಗಳ ಕಾಲ ನಡೆಯಲಿರುವ ಮಹೋತ್ಸವಕ್ಕೆ ಬೆಳಗ್ಗೆ ಚಾಲನೆ ನೀಡಲಾಯಿತು.

ಪೂರ್ವಾರಾಧನೆ ಅಂಗವಾಗಿ ರಾಘವೇಂದ್ರ ಸ್ವಾಮಿಗಳ ಮೂಲ ಮೃತಿಕಾ ಬೃಂದಾವನ ಹಾಗೂ ಆಂಜನೇಯ ದೇವರ ಮೂಲ ವಿಗ್ರಹಕ್ಕೆ ಮುಂಜಾನೆ ಪಂಚಾಮೃತ ಅಭಿಷೇಕ, ಆಷ್ಟೋತ್ತರ ಹಾಗೂ ಮಹಾ ಮಂಗಳಾರತಿ ಸೇವೆಗಳನ್ನು ಮಾಡಲಾಯಿತು.

ದೇವಾಲಯದಲ್ಲಿ ಮಧ್ಯಾಹ್ನ ವಿಶೇಷ ಪೂಜಾ ಕಾರ್ಯಗಳು ನಡೆದವು. ಮಹಾ ನೈವೇದ್ಯ, ಹಸ್ತೋದಕ ಹಾಗೂ ಅಲಂಕಾರ ಸೇವೆಗಳನ್ನು ನೆರವೇರಿಸಲಾಯಿತು.

ಸಂಜೆ ಅಷ್ಟಾವಧಾನ, ಪ್ರಾಕಾರೋತ್ಸವ ಹಾಗೂ ಮಹಾಮಂಗಳಾರತಿ ಸೇವೆಗಳು ನಡೆದವು. ದೇವಾಲಯಕ್ಕೆ ಭೇಟಿ ನೀಡಿದ ಭಕ್ತರಿಗೆ ಸರದಿಯ ಸಾಲಿನಲ್ಲಿ ರಾಯರ ಬೃಂದಾವನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅನ್ನದಾಸೋಹ ನಿರಂತರವಾಗಿತ್ತು.

ಶುಕ್ರವಾರ ಮಧ್ಯಾರಾಧನೆ ಹಾಗೂ ಶನಿವಾರ ಉತ್ತರಾಧನೆ ಕಾರ್ಯಕ್ರಮಗಳು ನೆರವೇರಲಿವೆ. ಮೂರು ದಿನಗಳ ಕಾಲ ನಿತ್ಯ ಪಂಚಾಮೃತ ಅಭಿಷೇಕ, ಮಹಾ ಪೂಜೆ, ವಿವಿಧ ಅಲಕಾಂರ ಪೂಜೆಗಳು, ಅನ್ನ ಸಂತರ್ಪಣೆ ಹಾಗೂ ಸಂಜೆ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ದೇವಾಲಯದ ಧರ್ಮದರ್ಶಿಗಳಾದ ಗೋಪಾಲ್ ಲಾಡ್, ನೀಲಕಂಠಯ್ಯ, ರುದ್ರಸ್ವಾಮಿ, ಮಂಜುನಾಥ, ಮಾರುತಿ ರೇವಣ್ಕರ್, ಸುನಿಲ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net