

ಮೈಸೂರು: ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಧನುರ್ಮಾಸ ಪೂಜೆಯಲ್ಲಿ ಮಹಿಷಾಸುರನಿಗೆ ಅವಮಾನ ಮಾಡಲಾಗಿದ್ದು, ದೇವಸ್ಥಾನ ಮಂಡಳಿ ಹಾಗೂ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಹಿಷ ದಸರಾ ಆಚರಣೆ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಆಗ್ರಹಿಸಿದರು.
ನಂಜನಗೂಡು ದೇವಸ್ಥಾನದ ವತಿಯಿಂದ ಹಮ್ಮಿಕೊಂಡಿದ್ದ ಧನುರ್ಮಾಸ ಪೂಜೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿಯು ಮಹಿಷಾಸುರ ಚಿತ್ರವನ್ನು ರಂಗೊಲಿಯಲ್ಲಿ ಬಿಡಿಸಿ ನಂತರ ಆ ಚಿತ್ರವನ್ನು ತುಳಿದು ಅಳಿಸಿ ಹಾಕಿರುವುದು ಖಂಡನೀಯ. ಈ ವಿಕೃತಿಯನ್ನು ತಡೆಯಲು ಹೋದವರ ಮೇಲೆ ಪ್ರಕರಣ ದಾಖಲಿಸಿರುವುದು ಖಂಡನೀಯ. ದೂರು ದಾಖಲಿಸಿದವರ ವಿರುದ್ಧ ಪ್ರತಿದೂರು ದಾಖಲಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೂಲ ನಿವಾಸಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕಾರ್ಯ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದಿಂದ ನಡೆದಿದೆ. ಈ ಕೃತ್ಯವನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಮೂಲನಿವಾಸಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದವರ ವಿರುದ್ಧ ಸರ್ಕಾರ ಈ ಕುರಿತು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಜಾತಿ ಜನಗಣತಿ ವರದಿ ಜಾರಿಯಾಗಬೇಕು. ಅದನ್ನು ಬಹಿರಂಗಪಡಿಸದಿದ್ದರೆ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ. ಕಾಂತರಾಜ್ ವರದಿ ಜಾರಿ ಮಾಡುವ ಶಕ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ ಇದ್ದು, ಕೂಡಲೇ ಅವರು ವರದಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್ ಚಂದ್ರಗುರು, ಲೇಖಕರಾದ ಸಿದ್ದಸ್ವಾಮಿ, ಸೋಮಯ್ಯ ಮಲೆಯೂರು, ಎಪಿಎಂಸಿ ಮಾಜಿ ಉಪಾಧ್ಯಕ್ಷ ಅಹಿಂದ ಜವರಪ್ಪ ಹಾಗೂ ಇತರರು ಇದ್ದರು.