

ಉಡುಪಿ: ದ್ರಾವಿಡ ದೊರೆ ಮಹಿಷಾಸುರನ ಬಗ್ಗೆ ಜನತೆಗೆ ಅರಿವು ಮೂಡಿಸುವ ಉದ್ದೇಶದಿಂದ ಅ.15ರಂದು ಉಡುಪಿಯಲ್ಲಿ ಮಹಿಷಾ ದಸರಾ ಮತ್ತು ಮೂಲ ನಿವಾಸಿಗಳ ಸಾಂಸತಿಕ ಹಬ್ಬ ಆಚರಿಸುವುದಾಗಿ ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 10.30ಕ್ಕೆ ಅಜ್ಜರಕಾಡು ಹುತಾತ್ಮ ಸ್ಮಾರಕದಿಂದ ವಿವಿಧ ವಾಹನ ಜಾಥಾದೊಂದಿಗೆ ಮಹಿಷ ಟ್ಯಾಬ್ಲೋ ಮೆರವಣಿಗೆ ಹೊರಟು ಜೋಡುಮಾರ್ಗವಾಗಿ ಬನ್ನಂಜೆ ಮೂಲಕ ಕರಾವಳಿ ಬೈಪಾಸ್ನಿಂದ ಆದಿಉಡುಪಿ ಜಿಲ್ಲಾ ಅಂಬೇಡ್ಕರ್ ಭವನ ತಲುಪಲಿದೆ. ಕಲಬುರಗಿಯ ಸಂಶೋಧನಾ ಬರಹಗಾರ ಡಾ. ವಿಠಲ ವಗ್ಗನ್ ಮಹಿಷಾಸುರ ಯಾರು ಎಂಬ ವಿಚಾರ ಸಂಕಿರಣ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಪ್ರಗತಿಪರ ಚಿಂತಕ ಶ್ರೀರಾಮ ದಿವಾಣ, ದಲಿತ ಚಿಂತಕ ನಾರಾಯಣ ಮಾಣೂರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ದಯಾನಂದ ಕಪ್ಪೆಟ್ಟು, ಲೋಕೇಶ್ ಪಡುಬಿದ್ರಿ, ಸಂಜೀವ ಬಳ್ಕೂರು, ಗಣೇಶ್ ನೇರ್ಗಿ, ಜಯನ್ ಮಲ್ಪೆ ಉಪಸ್ಥಿತರಿದ್ದರು.