ಚಾಮುಂಡೇಶ್ವರಿಯನ್ನು ಗೌರವಿಸುತ್ತೇವೆ, ಮಹಿಷಾಸುರನನ್ನು ಪೂಜಿಸುತ್ತೇವೆ..!

Mahishasura
Published on

ಮೈಸೂರು: ನಾವು ಮಹಿಷಾಸುರನಂತೆ ಪ್ರಕೃತಿಯ ಮೇಲೆ ನಂಬಿಕೆ, ಹೆಣ್ಣಿನ ಮೇಲೆ ಗೌರವ ಹೊಂದಿದವರು. ನಾವು ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿಯನ್ನು ಗೌರವಿಸುತ್ತೇವೆ, ಮಹಿಷಾಸುರನನ್ನು ಪೂಜಿಸುತ್ತೇವೆ ಎಂದು ನಗರದ ಶ್ರೀ ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶಸ್ವಾಮೀಜಿ ಹೇಳಿದರು.

ಮಹಿಷ ದಸರಾ ಆಚರಣಾ ಸಮಿತಿ ಹಾಗೂ ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘ ನಗರದ ಮಾನಸಗಂಗೋತ್ರಿಯ ಲಲಿತಕಲೆಗಳ ಕಾಲೇಜು ಸಭಾಂಗಣದಲ್ಲಿ ‘ಮಹಿಷಮಂಡಲದ ಆದಿದೊರೆ ಮಹಿಷಾಸುರ: ಒಂದು ಚಾರಿತ್ರಿಕ ನೋಟ’ ವಿಷಯದ ಕುರಿತು ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಮಹಿಷಾಸುರನನ್ನು ಪೂಜಿಸಿದರೆ ನಮ್ಮ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಹಾಗಿದ್ದರೆ ಮಹಿಷನನ್ನು ಪೂಜಿಸಲು ಅವಕಾಶ ನೀಡದೆ ಇದ್ದರೆ ಆತನ ಮೇಲೆ ನಂಬಿಕೆ ಇಟ್ಟಿರುವ ಕೋಟ್ಯಾಂತರ ಜನರ ಭಾವನೆಗಳಿಗೆ ಧಕ್ಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಧಾರ್ಮಿಕ ಶ್ರದ್ಧೆ, ನಂಬಿಕೆ, ಆಚಾರ ವಿಚಾರ, ಅಭಿವ್ಯಕ್ತಿ ಸ್ವಾತಂತ್ರೃವನ್ನು ಸಂವಿಧಾನ ಎಲ್ಲರಿಗೂ ನೀಡಿದ್ದಾರೆ. ಹಾಗಾಗಿ ನಮ್ಮ ಧಾರ್ಮಿ ಕ ಶ್ರದ್ಧೆ, ನಂಬಿಕೆಯನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ನಮ್ಮ ಆಚರಣೆಗಳನ್ನು ಅನಾಚಾರ, ದುರಾಚಾರ ಎಂದು ಹೇಳುವವರು ಸಂವಿಧಾನ ನಮಗೆ ನೀಡಿರುವ ಧಾರ್ಮಿಕ ಹಕ್ಕುಗಳನ್ನು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ವಂಶಸ್ಥರಾಗಿರುವ ನಾವು ಸಾಮರಸ್ಯದಿಂದ ಒಗ್ಗೂಡುತ್ತೇವೆಯೇ ಹೊರತು ಸಾಮರಸ್ಯ ಕದಡುವವರಲ್ಲ ಎಂದು ಹೇಳಿದರು.

ಚಿಂತಕ ಡಾ.ಕೃಷ್ಣಮೂರ್ತಿ ಚಮರಂ, ಮೈಸೂರು ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್‌ಚಂದ್ರ ಗುರು, ಹಿರಿಯ ಲೇಖಕ ಸಿದ್ದಸ್ವಾಮಿ, ಮಾಜಿ ಮೇಯರ್ ಪುರುಷೋತ್ತಮ್, ಸಂಶೋಧಕರ ಸಂಘದ ಅಧ್ಯಕ್ಷ ಸಿ.ಮಹೇಶ್, ವಿಚಾರವಾದಿ ಪ್ರೊ.ಕೆ.ಎಸ್. ಭಗವಾನ್, ಇತಿಹಾಸತಜ್ಸ ಪ್ರೊ.ನಂಜರಾಜೇ ಅರಸ್, ಹಂಪಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ಚಿನ್ನಸ್ವಾಮಿ ಸೋಸಲೆ,ಹಿರಿಯ ಪತ್ರಕರ್ತ ಅಂಶಿಪ್ರಸನ್ನಕುಮಾರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net