

ರಾಯಚೂರು ಕಳೆದ ಮೂರುದಿನಗಳಿಂದ ನಗರ ಸೇರಿದಂತೆ ಜಿಲ್ಲಾಧ್ಯಂತ ಪ್ರವಾಸ ಮಾಡಿರುವೆ. ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿವೆ. ಆದರೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು.
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶುಕ್ರವಾರ ರಾಜ್ಯ ಮಹಿಳಾ ಆಯೋಗ, ಜಿಲ್ಲಾಡಳಿತ,ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿದ್ದ ಮಹಿಳಾ ಸ್ಪಂದನಾ ಕಾರ್ಯಕ್ರಮ, ಮಹಿಳಾ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಹಾಗೂ ಪೋಷಣಾ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ ಆದರೆ ಸಮಸ್ಯೆಗಳಿಗೆ ಸ್ಪಂದಿಸುವ ಅಧಿಕಾರಿಗಳಿಲ್ಲ, ಜತೆಗೆ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ ಸಿಇಒ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸ್ಪಂದನೆ ನೀಡಿಲ್ಲವೆಂದು ಅಸಮಾಧಾನ ಹೊರ ಹಾಕಿದರು.
ಜಿಲ್ಲೆಯಲ್ಲಿ ಲಕ್ಷಾಂತರ ಸಮಸ್ಯೆ ಸರಮಾಲೆಯೇ ಇದೆ. ಇದಕ್ಕೆ ಉತ್ತರ ನೀಡಬೇಕಾದವರೇ ಇಲ್ಲದೇ ಇರುವುದರಿಂದ ಸಭೆಯನ್ನು ಮೊಟಕುಗೊಳಿಸುವುದಾಗಿ ತಿಳಿಸಿದರು. ಕ್ಷಣಾರ್ಧದಲ್ಲೇ ಬಗೆಹರಿಸುವ ಸಮಸ್ಯೆ ಇದ್ದರೂ ಅಧಿಕಾರಿಗಳು ಮೂರು ನಾಲ್ಕು ವರ್ಷಗಳಿಂದ ಕಚೇರಿಗೆ ಅಲೆದಾಡುಸುತ್ತಿದ್ದು ಕಂಡು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರ ಪ್ರದೇಶದಲ್ಲಿನ ಗೀತಾ ಎನ್ನುವವರ ಮನೆಯ ಆಸ್ತಿಗೆ ಇ-ಖಾತೆ ನೀಡಲು ಕಳೆದ 3 ವರ್ಷಗಳಿಂದ ಪಾಲಿಕೆಗೆ ಅಲೆದಾಡುತ್ತಿದ್ದು, ಉತ್ತರ ನೀಡಬೇಕಾದ ಪಾಲಿಕೆ ಅಧಿಕಾರಿಗಳು ಸ್ಥಳದಲ್ಲಿ ಇಲ್ಲದೇ ಇರುವುದು ಕಂಡು ಅಸಮಾಧಾನ ಹೊರ ಹಾಕಿದರು. ಸಭೆ ಕುರಿತು ಅಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ಇದ್ದರೂ ಗೈರಾಗಿದ್ದನ್ನು ಕಂಡು ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ಪತ್ರ ಬರೆದು ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದ ಮಹಿಳೆಗೆ ಇಬ್ಬರು ಅಂಧ ಮಕ್ಕಳಿದ್ದು ಸಲಕರಣೆಗಳು ನೀಡಿದೇ ಮಕ್ಕಳನ್ನು ನೋಡಿಕೊಳ್ಳಲು ಉದ್ಯೋಗವಿಲ್ಲ. ಜೀವನಕ್ಕೆ ನಿತ್ಯ ತೊಂದರೆಯಾಗಿದೆ. ಅಂಗನವಾಡಿ ಸಹಾಯಕ ಹುದ್ದೆಗೆ ಅರ್ಜಿ ಹಾಕಿದ್ದು ಅನುಕಂಪ ಆಧಾರದ ಮೇಲೆ ಉದ್ಯೋಗ ನೀಡದೆ ತಿರಸ್ಕರಿಸಿದ್ದಾರೆ ಎಂದು ದೂರಿದರು.
ನಿತ್ಯ ಊಟಕ್ಕೆ ತೊಂದೆಯಾಗಿದ್ದು ಬೇಡಿ ತಿನ್ನುವ ಸ್ಥಿತಿ ಇದೆ. ಇಲಾಖೆಯಡಿ ಯಾವುದಾದರೂ ಉದ್ಯೋಗ ನೀಡಲು ಅಲೆದಾಡುತ್ತಿದ್ದು ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲವೆಂದು ದೂರಿದರು. ಅಂಧ ಮಕ್ಕಳ ಶಾಲೆಗೆ ಸೇರಿಸಿದರೆ ಕುಂಟುನೆಪ ಹೇಳಿ ಕಳುಹಿಸುತ್ತಿದ್ದು, ಮಕ್ಕಳನ್ನು ನೋಡಿಕೊಳ್ಳುವುದರ ಜತೆಗೆ ಕೂಲಿ ಕೆಲಸ ಮಾಡುತ್ತಿದ್ದೇವೆ. ಗ್ರಾಮದಲ್ಲಿ ಯಾವುದಾದರೂ ಉದ್ಯೋಗ ನೀಡಿ ಜೀವನ ನಡೆಸಲು ಅವಕಾಶ ಮಾಡಿ ಕೊಡಲು ಮನವಿ ಮಾಡಿದರು. ಸ್ಪಂದಿಸಿದ ಆಯುಕ್ತೆ ಶೀಘ್ರದಲ್ಲಿ ಜೀವನಕ್ಕೆ ಬೇಕಾಗುವ ಅನುಕೂಲ ಮಾಡಿಕೊಡಲಾಗುತ್ತದೆಂದು ತಿಳಿಸಿದರು.
ಈ ಸಂಸದರ್ಭದಲ್ಲಿ 1ನೇ ಎಎಸ್ಪಿ ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನವೀನ್‌ಕುಮಾರ, ಡಿಡಿಎಲ್‌ಆರ್ ಅಧಿಕಾರಿ ರೇಷ್ಮಾ, ಜಿಪಂ ಯೋಜನಾಧಿಕಾರಿ ಶರಣಬಸವರಾಜ ಸೇರಿದಂತೆ ಅನೇಕರು ಇದ್ದರು.