ಮಹಿಳಾ ಮೋರ್ಚಾಕ್ಕೆ ಹುಲಿನಾಯ್ಕರ್ ಪುತ್ರಿ ; ಪಕ್ಷನಿಷ್ಠ, ಪ್ರಾಮಾಣಿಕರ ಕಡೆಗಣನೆಗೆ ಅಸಮಾಧಾನ

bjp
Published on

ತುಮಕೂರು: ಜಿಲ್ಲಾ ಬಿಜೆಪಿ ಈಗ ಕಾರ್ಯಕರ್ತರ ಪಕ್ಷವಾಗಿ ಉಳಿಯದೆ, ಆರ್ಥಿಕ ಬಲಾಢ್ಯರ ಪಕ್ಷವಾಗಿ ಬದಲಾಗುತ್ತಿದೆ. ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಪಕ್ಷ ನಿಷ್ಠ , ಪ್ರಾಮಾಣಿಕ ಕಾರ್ಯಕರ್ತರಿಗಿಂತ ಹಣಬಲವುಳ್ಳವರನ್ನು ಪದಾಧಿಕಾರಿಗಳ ಹುದ್ದೆಗೆ ನೇಮಿಸಲಾಗುತ್ತಿದೆ ಎಂಬ ಚರ್ಚೆ ಆರಂಭವಾಗಿದೆ.

3 ತಿಂಗಳ ಹಿಂದೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಬಿ.ಸುರೇಶ್‌ಗೌಡ ನೇಮಕಗೊಂಡ ಬಳಿಕ ಜಿಲ್ಲಾ ಘಟಕವನ್ನು ಪುನರ್‌ರಚಿಸಿ ಪಕ್ಷ ಸಂಘಟನೆಗೆ ಒತ್ತು ಕೊಡಲಾಗಿದೆ. 11 ಮಂಡಲಗಳ ಪೈಕಿ ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಚಿಕ್ಕನಾಯಕನಹಳ್ಳಿ, ತುರುವೇಕೆರೆ ಹಾಗೂ ತುಮಕೂರು ಮಂಡಲ ಅಧ್ಯಕ್ಷರ ಆಯ್ಕೆ ಕಗ್ಗಂಟನ್ನು ಬಗೆಹರಿಸಲಾಗಿದೆ. ಆದರೆ, ಜಿಲ್ಲಾ ಘಟಕಕ್ಕೆ ಶಕ್ತಿ ತುಂಬಬಲ್ಲ ಯುವ ಮೋರ್ಚಾ ಆಯ್ಕೆ ಜಿಲ್ಲಾಧ್ಯಕ್ಷರಿಗೆ ಸವಾಲಾಗಿದೆ. ಇನ್ನು ಮಹಿಳಾ ಮೋರ್ಚಾ, ಎಸ್ಸಿ, ಎಸ್ಟಿ ಮೋರ್ಚಾ ಸೇರಿ 7 ಮೋರ್ಚಾಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕೂಡ ವಿಳಂಬವಾಗಿದೆ.

ಪುತ್ರಿಯ ನಿಶ್ಚಿತಾರ್ಥ ಕಾರ್ಯದಲ್ಲಿ ಬ್ಯುಸಿಯಾಗಿದ್ದ ಸುರೇಶ್‌ಗೌಡ ಹೆಗಲಿಗೆ ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಬೂತ್ ಸಮಿತಿ ರಚನೆ ಜವಾಬ್ದಾರಿ ಕೂಡ ಬಿದ್ದಿದೆ. ಹಾಗಾಗಿ, ಪಕ್ಷದ ವಿವಿಧ ಮೋರ್ಚಾಗಳ ಆಯ್ಕೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಈ ಜಿಲ್ಲಾ ಘಟಕಕ್ಕೆ ಸರಿಸಮಾನವಾಗಿ 'ಸ್ತ್ರೀಶಕ್ತಿ'ಯನ್ನು ಪಕ್ಷದಲ್ಲಿ ಬಳಸಿಕೊಳ್ಳಲು ವೇದಿಕೆಯಾಗಿರುವ ಮಹಿಳಾ ಮೋರ್ಚಾಕ್ಕೂ ಸಹಜವಾಗಿ ಆಕಾಂಕ್ಷಿಗಳು ಹೆಚ್ಚಿದ್ದು ಜಾತಿ, ವರ್ಚಸ್ಸು, ಸಂಘಟನೆ ಚತುರತೆ ಉಳ್ಳವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಜವಾಬ್ದಾರಿ ಜಿಲ್ಲಾಧ್ಯಕ್ಷರ ಮೇಲಿದೆ.

ಹುಲಿನಾಯ್ಕರ್ ಪುತ್ರಿಗೆ ಪಟ್ಟ?: ಮಹಿಳಾ ಮೋರ್ಚಾಕ್ಕೆ ಕುರುಬ ಸಮುದಾಯದವರನ್ನು ನೇಮಿಸಿ ಹಿಂದುಳಿದ ವರ್ಗದವರಿಗೆ ಮನ್ನಣೆ ನೀಡುವುದಲ್ಲದೆ ಪಕ್ಷ ಸಂಘಟನೆಗೆ ಮತ್ತಷ್ಟು 'ಆರ್ಥಿಕ' ಶಕ್ತಿ ತುಂಬುವ ಉದ್ದೇಶ ಸುರೇಶ್‌ಗೌಡರದ್ದಾಗಿದೆ. ಹಾಗಾಗಿ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಪುತ್ರಿ ಡಾ.ಮನೋನ್ಮಣಿ ಅವರಿಗೆ ಮಹಿಳಾ ಘಟಕದ ಪಟ್ಟ ಕಟ್ಟಲು ಜಿಲ್ಲಾಧ್ಯಕ್ಷರು ಉತ್ಸುಕರಾಗಿದ್ದು, ಇದು ಪಕ್ಷ ನಿಷ್ಠ, ಪ್ರಾಮಾಣಿಕ ಕಾರ್ಯಕರ್ತರಲ್ಲಿ ಸಣ್ಣದಾಗಿ ಅಸಮಾಧಾನಕ್ಕೆ ಕಾರಣವಾಗಿದೆ.

2015ರಲ್ಲಿ ಜೆಡಿಎಸ್‌ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹುಲಿನಾಯ್ಕರ್ ಪರವಾಗಿ ಇಡೀ ಜಿಲ್ಲೆ ಸುತ್ತಿ ಚುನಾವಣೆ ನಡೆಸಿದ್ದ ಡಾ.ಮನೋನ್ಮಣಿ ಅವರಿಗೆ ರಾಜಕೀಯ ಆಸಕ್ತಿ ಇದೆಯಾದರೂ ಶ್ರೀದೇವಿ ವೈದ್ಯಕೀಯ ಆಸ್ಪತ್ರೆ ಜವಾಬ್ದಾರಿ ಇರುವುದರಿಂದ ಮೋರ್ಚಾ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆ ಕೂಡ ಉದ್ಭವಿಸಿದೆ.

ಸಂಘ ಪರಿವಾರದ ಹಿರಿಯ ಮುಖಂಡ ಬಡವನಹಳ್ಳಿ ಕೃಷ್ಣಮೂರ್ತಿ ಅವರ ಪುತ್ರಿ ವಾಸವಿಗುಪ್ತ ಹೆಸರೂ ಕೇಳಿಬಂದಿದೆ. ವಾಸವಿಗುಪ್ತ ಅವರು ಆರ್‌ಎಸ್‌ಎಸ್ ಮಹಿಳಾ ಘಟಕದ ವಿವಿಧ ಜವಾಬ್ದಾರಿ ನಿರ್ವಹಿಸುತ್ತಿದ್ದು ಪರಿವಾರದ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ.

ಈ ಹಿಂದೆ ಪಕ್ಷದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿರುವ ರೂಪಾ ಧನಂಜಯ್ ಕೂಡ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿರುವುದರಿಂದ 'ಜಾತಿ' ಲೆಕ್ಕಾಚಾರದಿಂದಾಗಿ ಸ್ವಲ್ಪ ಹಿನ್ನೆಡೆಯಾಗಿದೆ. ಮಾಜಿ ಅಧ್ಯಕ್ಷೆ ಪ್ರೇಮಾ ಹೆಗಡೆ ಮತ್ತೊಂದು ಅವಕಾಶಕ್ಕಾಗಿ ಕೋರಿದ್ದಾರೆ. ಅದೇ ರೀತಿ ರೇಖಾ ಶಿವಕುಮಾರ್, ವಿಜಯಾ ಭಾಸ್ಕರ್, ಪಾವಗಡದ ಜ್ಯೋತಿ ಸಹ ರೇಸ್‌ನಲ್ಲಿದ್ದಾರೆ. ಈ ಮಧ್ಯೆ ಜಿಪಂ ಸದಸ್ಯೆ ಡಾ.ನವ್ಯಾಬಾಬು ಹೆಸರೂ ಮಹಿಳಾ ಮೋರ್ಚಾಕ್ಕೆ ಕೇಳಿಬಂದಿದೆ.

ಅಸಮಾಧಾನದ ಹೊಗೆ !: ಪದಾಧಿಕಾರಿಗಳ ಹುದ್ದೆಗೆ ಜಾತಿಬಲ, ಹಣಬಲವುಳ್ಳವರಿಗೆ ಮಣೆಹಾಕಿ ಪ್ರಾಮಾಣಿಕರನ್ನು ಕಡೆಗಣಿಸಿರುವುದಲ್ಲದೆ, ಟೂಡಾ ಅಧ್ಯಕ್ಷ ಸ್ಥಾನ, ತುಮಕೂರು ಎಪಿಎಂಸಿ ಅಧ್ಯಕ್ಷ ಸ್ಥಾನ ಸೇರಿ ಸರ್ಕಾರದ ನೇಮಕಾತಿಗಳು ಉಳ್ಳವರ ಪಾಲಾಗುತ್ತಿರುವುದು ಪಕ್ಷ ನಿಷ್ಠರಲ್ಲಿ ಅಸಮಾಧಾನ ಭುಗಿಲೇಳಲು ಕಾರಣವಾಗಿದೆ. ಹಾಗಾಗಿ, ಜಿಲ್ಲಾಧ್ಯಕ್ಷ ಸುರೇಶ್‌ಗೌಡರಿಗೆ ವಿವಿಧ ಮೋರ್ಚಾಗಳ ಆಯ್ಕೆ ಸವಾಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net