ಪಿಲಿಕುಳದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾಮಂಜೂರು ಧರ್ಮಜ್ಯೋತಿ ಸಮಾಜ ಸೇವಾ ಕೇಂದ್ರ ಮತ್ತು ಸೌಹಾರ್ದ ಮಹಿಳಾ ಒಕ್ಕೂಟದ ಸಹಕಾರದೊಂದಿಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಇತ್ತೀಚೆಗೆ ನಡೆಯಿತು.

ಬೆಂಗಳೂರು ಲನಿರ್‌ಂಗ್ ಲಿಂಕ್ಸ್ ಫೌಂಡೇಶನ್ ಮ್ಯಾನೇಜರ್ ಅನುರಾಧ ನಿತಿನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಜಗತ್ತಿಗೆ ಬೆಳಕಾಗಿದ್ದಾರೆ ಹಾಗೂ ಅಪ್ರತಿಮ ಸಾಧನೆಯನ್ನು ಹಲವಾರು ಕ್ಷೇತ್ರಗಳಲ್ಲಿ ಮಾಡಿದ್ದಾರೆ ಎಂದರು.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೌಟುಂಬಿಕ ವಿಷಯಗಳಲ್ಲಿ ಮಹಿಳೆಯರು ಅತ್ಯಂತ ಜಾಗರೂಕರಾಗಿದ್ದು ಮಕ್ಕಳ ಮತ್ತು ಸಾಂಸಾರಿಕ ಸಮಸ್ಯೆಗಳ ಬಗ್ಗೆ ಸಮಯೋಚಿತ ತೀರ್ಮಾನಗಳನ್ನು ತೆಗೆದುಕೊಳ್ಳುವ ಹಾಗೂ ಸಂಬಂಧಗಳನ್ನು ಬೆಸೆಯುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ ಎಂದರು. ವಿದ್ಯಾವಂತ ಮಹಿಳೆ ಮಾತ್ರ ಮೌಲಿಕ ಯುವ ಜನಾಂಗವನ್ನು ರೂಪಿಸಬಲ್ಲಳು. ಅದು ದೇಶಕ್ಕೆ ಆಸ್ತಿಯಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಮಿಷನ್ ಸಂಯೋಜಕಿ ಅನುಷಾ ಇವರು ಇಲಾಖೆಯ ವಿವಿಧ ಕಾರ್ಯಕ್ರಮಗಳು ಹಾಗೂ ಮಹಿಳಾ ಸಂಬಂಧಿ ಕಾನೂನು ಕಾಯ್ದೆಗಳ ಕುರಿತು ವಿವರವಾದ ಮಾಹಿತಿ ನೀಡಿದರು ಧರ್ಮಜ್ಯೋತಿ ಸಮಾಜ ಸೇವಾ ಕೇಂದ್ರದ ನಿರ್ದೇಶಕಿ ಸಿಸ್ಟರ್ ಜೋಯಲ್ ಲಸ್ರಾದೋ ಸ್ವಾಗತಿಸಿದರು. ಕೇಂದ್ರದ ಕ್ಯುರೇಟರ್ ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿ, ಸೌಹಾರ್ದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಆಶಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net