

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಪ್ರತಿ ಮಹಿಳೆಯು ಹುಟ್ಟಿನಿಂದ ಸಾವಿನವರೆಗೂ ಹೋರಾಟದ ಬದುಕು ಸಾಗಿಸುತ್ತಿದ್ದಾಳೆ ಎಂದು ರಾಜ್ಯ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಮಾಂಡ್ಯವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಗರ ಕನ್ನಡ ಸಾಹಿತ್ಯ ಪರಿಷತ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಸಾಧನೆ ಮಾಡುವ ಮಹಿಳೆಯರು ಹೋರಾಟದ ಬದುಕೆ ಆಗಿರುತ್ತದೆ. ಗೃಹಿಣಿ, ಪೌರಕಾರ್ಮಿಕ ಮಹಿಳೆ, ರೈತ ಮಹಿಳೆ, ರಾಷ್ಟ್ರಪತಿ ದ್ರೌಪತಿಮುರ್ಮ ಅವರ ಬದುಕು ಹೋರಾಟವಾಗಿದೆ ಎಂದರು.
ಪ್ರತಿದಿನದ ಬದುಕಿನಲ್ಲಿ ಮಹಿಳೆ ಘನತೆಯಿಂದ ಬದುಕುವಂತ ಕಾಲಯಾವಾಗ ಬರುತ್ತದೆಯೋ ಆಗ ಅಂತಾರಾಷ್ಟ್ರೀಯ ಮಹಿಳಾ ದಿನದ ಆಚರಣೆಗೆ ಮಹತ್ವ ಬರುತ್ತದೆ. ಮಂಡ್ಯ ಜಿಲ್ಲೆಯು ಅನೇಕ ರೀತಿಯಲ್ಲಿ ಮಹತ್ವದ ಸಂಗತಿಯಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಸಂಚಿ ಹೊನ್ನಮ್ಮನಂತಹ ಮೊಟ್ಟಮೊದಲ ಕವಯತ್ರಿ ಸಿಗುತ್ತಾರೆ. ಮಹಿಳಾ ಸಾಹಿತಿಗಳಿದ್ದಾರೆ. ತ್ರಿವೇಣಿ ಅವರ ಸಾಹಿತ್ಯ ಓದದೆ ನಾವು ಸಾಹಿತಿಗಳಾಗಲು ಸಾಧ್ಯವಿಲ್ಲ ಎಂದು ಬಣ್ಣಿಸಿದರು.
ಇಡೀ ಶತಮಾನದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ 4 ಜನ ಮಹಿಳೆಯರಲ್ಲಿ ಮಂಡ್ಯದ ಜಯದೇವಿ ಅವರು ಒಬ್ಬರು, ಸಾಹಿತ್ಯ ಕ್ಷೇತ್ರದಲ್ಲಿ ಐತಿಹಾಸಿಕ ಕೊಡುಗೆಗಳನ್ನು ನೀಡಿದೆ. ಮಂಡ್ಯ ಜಿಲ್ಲೆ ಮಾದರಿಯಾಗಿದೆ. ಹೆಣ್ಣು-ಗಂಡು ಸಮಾನರು ಎನ್ನುವ ರೀತಿಯಲ್ಲಿ ತೋರಿಸುತ್ತಿದೆ. ಮಹಾತ್ಮಗಾಂಧಿಜೀ ಅವರು ಹೇಳಿದ್ದಾರೆ. ಹೆಣ್ಣು-ಗಂಡು ಸಮಾನರು. ಆದರೆ ಜೈವಿಕವಾಗಿ ಭಿನ್ನವಾಗಿದ್ದೇವೆ. ಬಾಲ್ಯವಿವಾಹದಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. 21 ವರ್ಷದವರೆಗೂ ಮದುವೆ ನಿಷೇಧವಿದ್ದರೂ 12, 13, 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಮದುವೆ ಮಾಡಲಾಗುತ್ತಿದೆ. ಇದಕ್ಕಾಗಿ ಓದನ್ನು ನಿಲ್ಲಿಸಲಾಗುತ್ತಿದೆ. ದೌರ್ಜನ್ಯಗಳನ್ನು ಎದುರಿಸಲಾಗದ ಪರಿಸ್ಥಿತಿಗಳು ಬದುಕಿನಲ್ಲಿ ಎದುರಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಚುನಾವಣೆಗಳು ಬಂದಿವೆ. ಮಹಿಳಾ ಮೀಸಲಾತಿ ಎಷ್ಟು ವರ್ಷಗಳಾಯಿತು. ಆದರೂ ಏಕೆ ಸಂಪೂರ್ಣವಾಗಿ ಜಾರಿಯಾಗಿಲ್ಲ. ರಾಜಕೀಯ ಪಕ್ಷಗಳು ವಿಧಾನಸಭಾ ಚುನಾವಣೆಯಲ್ಲಿ ಎಷ್ಟು ಮಹಿಳೆಯರಿಗೆ ಸ್ಪರ್ಧೆ ಮಾಡಲು ಅವಕಾಶ ನೀಡಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಇಂದು ಅಕ್ಷರ ಲೋಕದಲ್ಲಿನ ಕೆಲ ಮಹಿಳೆಯರು ಟಿವಿ, ಕಂಪ್ಯೂಟರ್, ಮೊಬೈಲ್ಗಳನ್ನು ಬಿಡಲಾಗದಷ್ಟು ಅಪ್ಪಿಕೊಂಡಿದ್ದಾರೆ. ಹಲವು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ಬಾಹ್ಯಕಾಶದವರೆಗೂ ಮಹಿಳೆಯರ ಚಿಂತನೆಗಳು ಸಾಧನೆ ಮಾಡಿವೆ ಎಂದು ನುಡಿದರು.
ನಗರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಜಾತಾ ಕೃಷ್ಣ, ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ತಾಲೂಕು ಅಧ್ಯಕ್ಷ ಚಂದ್ರುಲಿಂಗು, ರೈತ ಹೋರಾಟಗಾರ್ತಿ ಸುನಂದಾ ಜಯರಾಂ, ಮಾಂಡವ್ಯ ಶಿಕ್ಷಣ ಸಂಸ್ಥೆ ಶೈಕ್ಷಣಿಕ ಪಾಲುದಾರ ಚೇತನ್‌ಕೃಷ್ಣ, ಬಿ.ಎಂ.ಅಪ್ಪಾಜಪ್ಪ, ಅಂಜನಾ, ಶೋಭಾ, ಉಷಾರಾಣಿ ಇತರರಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಹೇಮಾ ಶಿವಲಿಂಗಯ್ಯ, ಡಾ.ಕೃಪಾ ಚಂದ್ರಶೇಖರ್, ಮಮತಾ ಎಂ.ಶೆಟ್ಟಿ, ಬಿ.ಆರ್.ನೀಲಾ ಶಿವಮೂರ್ತಿ, ಎಚ್.ಎಂ.ಮಮತಾ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.