

ಆಲೂರು : ಲಿಂಗ ತಾರತಮ್ಯ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಸಂಕಲ್ಪ ಮಾಡೋಣ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ. ಪ್ರಿಯಾಂಕಾ ಹೇಳಿದರು.
ತಾಲೂಕಿನ ಪಾಳ್ಯ ಹೋಬಳಿ ಕಣತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಘಟಕ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಇತಿಹಾಸ ಮತ್ತು ಸಮಕಾಲೀನ ಸಮಾಜದಲ್ಲಿನ ವಿದ್ಯಮಾನಗಳಿಗೆ ಮಹಿಳೆಯರ ಕೊಡುಗೆಗಳನ್ನು ಅಭಿನಂದಿಸುವ ದಿನವೇ ಅಂತಾರಾಷ್ಟ್ರೀಯ ಮಹಿಳಾ ದಿನದ ವಿಶೇಷತೆ ಎಂದರು.
ಮಹಿಳೆಯರು ಸಾಂಸ್ಕೃತಿಕ, ಶಿಕ್ಷಣ, ರಾಜಕೀಯ, ಸಾಮಾಜಿಕ, ಆರ್ಥಿಕ- ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿದ್ದಾರೆ.
ಲಿಂಗ ತಾರತಮ್ಯ ಮತ್ತು ಪಕ್ಷಪಾತದಿಂದ ಸಂಪೂರ್ಣ ಸಮಾಜ ಮುಕ್ತವಾದರೆ ಇನ್ನಷ್ಟು ಸಾಧನೆ ಮಾಡಲು ಸ್ತ್ರೀಯರಿಗೆ ರಹದಾರಿ ದೊರಕುತ್ತದೆ ಎಂದರು. ಕಣತೂರು ಶಾಲೆ ಮುಖ್ಯ ಶಿಕ್ಷಕಿ ಚಂದ್ರಮ್ಮ ಮಾತನಾಡಿ, ಮಹಿಳಾ ದಿನವು ಲಿಂಗ ತಾರತಮ್ಯ, ಪಕ್ಷಪಾತದಿಂದ ಸ್ತ್ರೀಯರನ್ನು ಮುಕ್ತವಾಗಿಸುವ ಭರವಸೆ ಇದೆ ಎಂದರು. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ನಿಂದನೆ ಕಡಿಮೆಯಾಗಬೇಕು. ಸಮಾನ ಹಕ್ಕುಗಳು ದೊರಕಬೇಕು ಎಂದರು. ಶಿಕ್ಷಕಿಯರಾದ ಎಚ್.ಎನ್.ಪ್ರಮೀಳಾ, ಕೆ.ಟಿ.ಶೋಭಾ, ಎಚ್.ಎಸ್.ರಾಜೇಶ್ವರಿ, ಕೆ.ರೂಪಾ, ಸಿದ್ದಯ್ಯ, ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಘಟಕದ ಕಾರ್ಯದರ್ಶಿ ಕೊಟ್ರೇಶ್, ಖಜಾಂಚಿ ಬಿ.ಎಸ್.ಹಿಮ, ಸಹ ಕಾರ್ಯದರ್ಶಿ ಎಚ್.ಡಿ.ಕುಮಾರ್ ಮತ್ತು ವಿವಿಧ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.